Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಉಡುಪಿಯ ಅಭಿವೃದ್ಧಿ ಹರಿಕಾರ, ಮಾಜಿ ಶಾಸಕ...

ಉಡುಪಿಯ ಅಭಿವೃದ್ಧಿ ಹರಿಕಾರ, ಮಾಜಿ ಶಾಸಕ ಯು.ಆರ್.ಸಭಾಪತಿ ನಿಧನ

21 May 2023 12:43 PM IST
share
ಉಡುಪಿಯ ಅಭಿವೃದ್ಧಿ ಹರಿಕಾರ, ಮಾಜಿ ಶಾಸಕ ಯು.ಆರ್.ಸಭಾಪತಿ ನಿಧನ

ಉಡುಪಿ, ಮೇ 21: ಮಾಜಿ ಶಾಸಕ, ಕಾಂಗ್ರೆಸ್ ಹಿರಿಯ ಮುಖಂಡ, ಅಪ್ರತಿಮ ಹೋರಾಟಗಾರ, ಉಡುಪಿಯ ಅಭಿವೃದ್ಧಿಯ ಹರಿಕಾರ ಯು.ಆರ್. ಸಭಾಪತಿ (71) ಅಲ್ಪಕಾಲದ ಅಸೌಖ್ಯದಿಂದ ಉಡುಪಿ ಬಡಗುಪೇಟೆಯಲ್ಲಿರುವ ಸ್ವಗೃಹದಲ್ಲಿ ಇಂದು ಬೆಳಗ್ಗೆ ನಿಧನರಾದರು.  

ಕೆಲ ವರ್ಷಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾದ ಇವರು, ಚಿಕಿತ್ಸೆ ಮುಂದು ವರೆಸಿದ್ದರು. ಕೆಲ ವರ್ಷಗಳ ಹಿಂದಿನವರೆಗೂ ರಾಜಕೀಯದಲ್ಲಿ ತೊಡಗಿಸಿ ಕೊಂಡಿದ್ದ ಇವರು, ಇತ್ತೀಚೆಗೆ ಸಕ್ರೀಯ ರಾಜಕಾರಣದಿಂದ ಹಿಂದೆ ಸರಿದಿದ್ದರು. ಆರೋಗ್ಯದಲ್ಲಿ ಧಿಡೀರ್ ಏರುಪೇರಾದ ಹಿನ್ನೆಲೆಯಲ್ಲಿ ಬೆಳಗ್ಗೆ ಮನೆಯಲ್ಲಿಯೇ ಇವರು ಕೊನೆಯುಸಿರೆಳೆದರು. ಇವರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

1952ರಲ್ಲಿ ಹುಟ್ಟಿದ ಇವರು, 1987ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪರಿಷತ್‌ನ ಉಡುಪಿ ಉದ್ಯಾವರ ಕ್ಷೇತ್ರದಿಂದ ಸದಸ್ಯರಾಗಿ ಚುನಾಯಿತರಾದರು. ಅಲ್ಲದೆ ಪರಿಷತ್‌ನ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿಯೂ ಇವರು ಕಾರ್ಯ ನಿರ್ವಹಿಸಿದ್ದರು. ಅದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉತ್ತರ ವಿಭಾಗದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ದುಡಿದಿದ್ದರು.

1989ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಉಡುಪಿ ಕ್ಷೇತ್ರದಿಂದ ಟಿಕೆಟ್ ಸಿಗದ ಕಾರಣ ಬಂಡಾಯ ಅಭ್ಯರ್ಥಿಯಾಗಿ ಮನೋರಮಾ ಮಧ್ವರಾಜ್ ವಿರುದ್ಧ ಸ್ಪರ್ಧಿಸಿ ಅಲ್ಪ ಮತಗಳ ಅಂತರದಲ್ಲಿ ಸೋಲು ಕಂಡರು. ಬಳಿಕ ಪಕ್ಷದಿಂದ ಉಚ್ಛಾಟನೆ ಗೊಂಡ ಪರಿಣಾಮ ತಮ್ಮ ಪರಿಷತ್ ಸದಸ್ಯತ್ವವನ್ನು ಕಳೆದುಕೊಂಡರು. ಆ ಸ್ಥಾನಕ್ಕೆ ಉಪಚುನಾವಣೆ ನಡೆದಾಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮತ್ತೊಮ್ಮೆ ಪರಿಷತ್ ಸದಸ್ಯರಾಗಿ ಆಯ್ಕೆಯಾದರು.

1991ರಲ್ಲಿ ಜನತಾ ದಳ ಪಕ್ಷಕ್ಕೆ ಸೇರ್ಪಡೆಗೊಂಡ, ಇವರು 1991ರ ಲೋಕಸಭಾ ಚುನಾವಣೆಯಲ್ಲಿ ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಆಸ್ಕರ್ ಫೆರ್ನಾಂಡಿಸ್ ವಿರುದ್ಧ ಜನತಾ ದಳದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ಮುಂದೆ ಎಸ್.ಬಂಗಾರಪ್ಪ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಪಕ್ಷ(ಕೆಪಿಸಿ)ಕ್ಕೆ ಸೇರ್ಪಡೆಗೊಂಡ ಸಭಾಪತಿ, 1994ರಲ್ಲಿ ಕೆಪಿಸಿಯಿಂದ ಉಡುಪಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದರು.

ಮುಂದೆ ಕೆಪಿಸಿ -ಕಾಂಗ್ರೆಸ್ ಜೊತೆ ವಿಲೀನಗೊಂಡಿದ್ದು, 1999ರ ವಿಧಾನ ಸಭಾ ಚುನಾವಣೆಯಲ್ಲಿ ಸಭಾಪತಿ, ಕಾಂಗ್ರೆಸ್ ಪಕ್ಷದಿಂದ ಉಡುಪಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾದರು. 2004ರ ವಿಧಾನಸಭಾ ಚುನಾವಣೆ ಯಲ್ಲಿ ಇವರು ರಘುಪತಿ ಭಟ್ ವಿರುದ್ಧ ಪರಾಜಯಗೊಂಡರು. 2008ರ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಿಂದ ಅಭ್ಯರ್ಥಿಗಳ ಪಟ್ಟಿಯಲ್ಲಿ ತನ್ನ ಹೆಸರಿದ್ದರೂ ಕೊನೆ ಕ್ಷಣದಲ್ಲಿ ಸ್ಥಾನವನ್ನು ಪ್ರಮೋದ್ ಮಧ್ವರಾಜ್‌ಗೆ ಬಿಟ್ಟು ಕೊಟ್ಟರು. ಅದರ ನಂತರ ಅವರು ಚುನಾವಣೆಗೆ ಸ್ಪರ್ಧಿಸಲಿಲ್ಲ.  

2012ರಲ್ಲಿ ಸಭಾಪತಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಮುಂದೆ ಮತ್ತೆ ಅವರು ಕಾಂಗ್ರೆಸ್ ಪಕ್ಷಕ್ಕೆ ವಾಪಾಸ್ಸಾದರು. ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ ಅವರು,  ಅಖಿಲ ಭಾರತ ಮೀನುಗಾರ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ರಾಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಉಡುಪಿ ಆದಿತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ, ಉಡುಪಿ ಜಿಲ್ಲಾ ಭಾರತ್ ಸೇವಾದಳದ ಅಧ್ಯಕ್ಷರಾಗಿಯೂ ಕಾರ್ಯನಿರ್ವ ಹಿಸಿದ್ದರು.

ಗಣ್ಯರಿಂದ ಸಂತಾಪ: ಇವರ ನಿಧನಕ್ಕೆ ಕೇಮಾರು ಶ್ರೀಈಶ ವಿಠಲದಾಸ ಸ್ವಾಮೀಜಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ರಘುಪತಿ ಭಟ್ ಕೆ., ಶಾಸಕ ಯಶ್‌ಪಾಲ್ ಸುವರ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಜನಾರ್ದನ್ ತೋನ್ಸೆ, ಬಿ.ನರಸಿಂಹಮೂರ್ತಿ ಮತ್ತು ರಾಘವೇಂದ್ರ ಕಿಣಿ, ಉದಯ ಕುಮಾರ್ ಶೆಟ್ಟಿ ಕಿದಿಯೂರು, ಕಾಂಗ್ರೆಸ್ ಮುಖಂಡರಾದ ಪ್ರಸಾದ್‌ರಾಜ್ ಕಾಂಚನ್, ರಮೇಶ್ ಕಾಂಚನ್, ಭಾಸ್ಕರ ರಾವ್ ಕಿದಿಯೂರು, ಅಣ್ಣಯ್ಯ ಸೇರಿಗಾರ್, ಪ್ರಖ್ಯಾತ್  ಶೆಟ್ಟಿ, ಕುಶಲ ಶೆಟ್ಟಿ, ಕೃಷ್ಣಮೂರ್ತಿ ಆಚಾರ್ಯ, ಪ್ರಕಾಶ ಆಂದ್ರಾದೆ, ಶಬ್ಬೀರ್ ಅಹ್ಮದ್, ನಾಗೇಶ್ ಕುಮಾರ್ ಉದ್ಯಾವರ, ಸಂಜೀವ ಕಾಂಚನ್, ಪೀರ್ ಸಾಹೇಬ್, ಕೇಶವ ಕೋಟ್ಯಾನ್, ಸುರೇಶ್ ಶೆಟ್ಟಿ ಬನ್ನಂಜೆ, ದಿನೇಶ್ ಪುತ್ರನ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ದಿವಾಕರ್ ಕುಂದರ್, ಹರೀಶ್ ಕಿಣಿ, ಇಸ್ಮಾಯಿಲ್ ಆತ್ರಾಡಿ, ಎಂ.ಪಿ.ಮೊಯಿದಿನಬ್ಬ, ಹಬೀಬ್ ಅಲಿ, ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು, ಜಮಾತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಸಂತಾಪ ಸೂಚಿಸಿದ್ದಾರೆ.

ಯು.ಆರ್.ಸಭಾಪತಿ ತಮ್ಮ ಶಾಸಕತ್ವದ ಅವಧಿಯಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಬ್ರಹ್ಮಗಿರಿಯಲ್ಲಿ ಸರಕಾರಿ ನಿವೇಶನ ಒದಗಿಸಿಕೊಡುವಲ್ಲಿ ಸಹಕರಿಸಿದ್ದು, ಇವರ ನಿಧನಕ್ಕೆ ಸಂಘದ ಜಿಲ್ಲಾಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಸಂತಾಪ ವ್ಯಕ್ತಪಡಿಸಿದ್ದಾರೆ.

ಬೀಡಿನಗುಡ್ಡೆಯಲ್ಲಿ ಅಂತ್ಯಕ್ರಿಯೆ: ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ ಬೀಡಿನಗುಡ್ಡೆಯ ರುದ್ರಭೂಮಿಯಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿಸ ಲಾಯಿತು. ನೂರಾರು ಮಂದಿ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಮುಖಂಡರು ಸೇರಿ ಪಾರ್ಥಿವ ಶರೀರದ ದರ್ಶನ ಪಡೆದರು.

ಜನಪರ ಧ್ವನಿ....ಅಪ್ರತಿಮ ಹೋರಾಟಗಾರ...!

1989ರಲ್ಲಿ ರಾಜ್ಯ ಸರಕಾರ ಶೇಂಧಿ ನಿಷೇಧ ಮಾಡಿದಾಗ ಅವಿಭಜಿತ ದ.ಕ. ಜಿಲ್ಲೆಯಾದ್ಯಂತ ಮೂರ್ತೆದಾರರ ಚಳವಳಿ ಆರಂಭಗೊಂಡಿತು. ಇದಕ್ಕೆ ಬೆಂಬಲ ವಾಗಿ ಯು.ಆರ್.ಸಭಾಪತಿ ಶೇಂದಿ ಬಳಕೆದಾರರ ಸಂಘವನ್ನು ಸ್ಥಾಪಿಸಿ ತೀವ್ರ ಹೋರಾಟವನ್ನು ನಡೆಸಿದ್ದರು.

1994ರ ಎಂಆರ್‌ಪಿಎಲ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಇವರು, ಸಾಕ್ಷರತಾ ಚಳವಳಿಯಲ್ಲೂ ಸಾಕಷ್ಟು ತೊಡಗಿಸಿಕೊಂಡಿದ್ದರು. ಅಲ್ಲದೆ ಉಡುಪಿಗೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರಾಗುವಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ಅದೇ ರೀತಿ ಅಜ್ಜರಕಾಡು ಮಹಿಳೆಯರ ಸರಕಾರಿ ಪದವಿ ಕಾಲೇಜು ಇವರದ್ದೇ ಕೊಡುಗೆಯಾಗಿದೆ.

ಉಡುಪಿ ಜಿಲ್ಲೆಗೆ ಕಾಂಕ್ರಿಟ್ ರಸ್ತೆಗಳ ಕಲ್ಪನೆಯನ್ನು ಮೊದಲ ಬಾರಿಗೆ ಪರಿಚಯಿಸಿದ ಕೀರ್ತಿ ಯು.ಆರ್. ಸಭಾಪತಿಗೆ ಸಲ್ಲುತ್ತದೆ. ಸರಕಾರಿ ಕಚೇರಿಗಳು ಕಂಪ್ಯೂಟರೀಕರಣ ಆಗಬೇಕೆಂಬ ಯೋಚನೆಯನ್ನು ಅವರ ಆ ಕಾಲದಲ್ಲೇ ಮಾಡಿದ್ದರು. 1970ರಿಂದ 90ರವರೆಗೆ ಪ್ರಭಾವಿ ನಾಯಕ ಹಾಗೂ ವಾಗ್ಮಿ ಯಾಗಿದ್ದ ಸಭಾಪತಿ ಸ್ಟಾರ್ ಪ್ರಚಾರಕರಾಗಿದ್ದರು.

ಬೀಡಿನಗುಡ್ಡೆಯಲ್ಲಿದ್ದ ಘನತ್ಯಾಜ್ಯ ಘಟಕವನ್ನು ಅಲೆವೂರು ಕರ್ವಾಲುಗೆ ಸ್ಥಳಾಂತರಿಸಿದಾಗ ಜೆಸಿಬಿಗೆ ಅಡ್ಡವಾಗಿ ಮಲಗಿ ವಿರೋಧ ವ್ಯಕ್ತಪಡಿಸುವ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದರು. ಅದೇ ರೀತಿ ಜಿಲ್ಲಾಧಿಕಾರಿ ಕಚೇರಿ ಮಣಿಪಾಲಕ್ಕೆ ಸ್ಥಳಾಂತರಿಸುತ್ತಿರುವುದನ್ನು ಕೂಡ ಇವರು ವಿರೋಧಿಸಿದ್ದರು.

ಅವಿಭಜಿತ ದ.ಕ. ಜಿಲ್ಲೆಯಿಂದ ಬೇರ್ಪಟ್ಟು ಉಡುಪಿ ಪ್ರತ್ಯೇಕ ಜಿಲ್ಲೆಯಾಗಲು ಇತರ ನಾಯಕರೊಂದಿಗೆ ಇವರು ಕೂಡ ಸಾಕಷ್ಟು ದುಡಿದಿದ್ದರು. ಉಡುಪಿ ಜಿಲ್ಲೆಯಾಗಿ ರಚನೆಯಾಗುವ ಸಂದರ್ಭ ಸಭಾಪತಿ, ಉಡುಪಿ ಕ್ಷೇತ್ರದ ಶಾಸಕ ರಾಗಿದ್ದರು. ಕೊಂಕಣ ರೈಲ್ವೆಗೆ ಜಾಗ ಕಳೆದುಕೊಂಡವವರಿಗೆ ನ್ಯಾಯ ಒದಗಿಸುವುದಕ್ಕಾಗಿ ಕೊಂಕಣ ರೈಲ್ವೇ ಸಂತ್ರಸ್ತರ ಹೋರಾಟ ಸಮಿತಿ ರಚಿಸಿ ಮಂಗಳೂರಿನಿಂದ ಬೈಂದೂರಿನವರೆಗೆ ರೈಲ್ವೆ ಹಳಿಯಲ್ಲಿ ಪಾದಯಾತ್ರೆ ನಡೆಸಿ ಗಮನ ಸೆಳೆದಿದ್ದರು.

ಕೋಮು ಸೌಹಾರ್ದತೆಗೆ ಹೆಚ್ಚು ಒತ್ತು ಕೊಡುತ್ತಿದ್ದ ಇವರು, ಬಾಬರಿ ಮಸೀದಿ ಧ್ವಂಸದ ಬಳಿಕ ನಡೆದ ಕೋಮುಗಲಭೆಯ ಸಂದರ್ಭದಲ್ಲಿ ಎರಡು ಧರ್ಮಗಳ ಮಧ್ಯೆ ಸೌಹಾರ್ದತೆ ಕಾಪಾಡಲು ಸಾಕಷ್ಟು ಶ್ರಮಿಸಿದ್ದರು. ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಪ್ರಗತಿಗಾಗಿ ಇವರು ಸಾಕಷ್ಟು ಶ್ರಮಿಸಿದ್ದರು. ಅಕ್ಷರ ಎಂಬ ವಾರ ಪತ್ರಿಕೆಯನ್ನು ಆರಂಭಿಸಿ ಒಂದು ವರ್ಷಗಳ ಕಾಲ ಮುನ್ನಡೆಸಿದರು. ಜನಪರ ಧ್ವನಿಯಾಗಿದ್ದ ಸಭಾಪತಿಯು ಪಿ.ಲಂಕೇಶ ಅವರಿಂದ ಸುಭಗ ಸಭಾಪತಿ ಎಂಬ ನಾಮಾಂಕಿತ ಪಡೆದಿದ್ದರು.

ಸಭಾಪತಿ ನಿಧನಕ್ಕೆ ಬಿಜೆಪಿ ಸಂತಾಪ

ಉಡುಪಿ ಜಿಲ್ಲೆಯ ಪ್ರಬುದ್ಧ ರಾಜಕಾರಿಣಿಗಳಲ್ಲೊಬ್ಬರು, ನೇರ ನಡೆ ನುಡಿಯ ಮಾಜಿ ಶಾಸಕ ಯು.ಆರ್.ಸಭಾಪತಿ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ತೀವ್ರ ಸಂತಾಪ ಸೂಚಿಸಿದೆ.

ನೂತನ ಉಡುಪಿ ಜಿಲ್ಲೆ ರಚನೆಯ ಸಂದರ್ಭದಲ್ಲಿ ಜಿಲ್ಲೆಯ ಇತರ ಹಿರಿಯ ರಾಜಕೀಯ ಮುತ್ಸದ್ಧಿಗಳ ಸಹಿತ ಮಾಜಿ ಶಾಸಕ ಯು.ಆರ್.ಸಭಾಪತಿಯವರ ಶ್ರಮ ಸ್ಮರಣೀಯ. ಅಗಲಿದ ಅವರ ದಿವ್ಯಾತ್ಮಕ್ಕೆ ಭಗವಂತನು ಚಿರ ಶಾಂತಿಯನ್ನು ಕರುಣಿಸಲಿ ಹಾಗೂ ಅವರ ಕುಟುಂಬಕ್ಕೆ ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಸ್ಲಿಮ್ ಒಕ್ಕೂಟ ಸಂತಾಪ

ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಪ್ರಮುಖ ರಾಜಕಾರಣಿ, ಉಡುಪಿಯ ಮಾಜಿ ಶಾಸಕ ಯು.ಆರ್ ಸಭಾಪತಿ ನಿಧನ ಉಡುಪಿ ಜಿಲ್ಲೆಗೆ ದೊಡ್ಡ ನಷ್ಟ ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಜಿಲ್ಲೆಯ ಸೌಹಾರ್ದದ ಪರಂಪರೆಯ ಪ್ರಬಲ ಪ್ರತಿಪಾದಕರಾಗಿದ್ದ ಅವರು ಸೌಹಾರ್ದಯುತ ಮತ್ತು ಜಾತ್ಯಾತೀತ ಸಮಾಜ ನಿರ್ಮಾಣದ ಮೂಲಕ ಮಾತ್ರ ಅಭಿವೃದ್ಧಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಾಧ್ಯ ಎಂಬುದು ಅವರ ನಿಲುವಾಗಿತ್ತು. ತನ್ನ ಯೌವನದಲ್ಲೇ ರಾಜಕೀಯದತ್ತ ಆಕರ್ಷಿತರಾಗಿದ್ದ ಅವರು ಯುವಕರನ್ನು ಧನಾತ್ಮಕ ರಾಜಕೀಯದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೆಪಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಪರಿಷತ್ ಸದಸ್ಯರಾಗಿ, ಶಿಕ್ಷಣ ಸ್ಥಾಯಿ ಸಮಿತಿಯ ಸದಸ್ಯರಾಗಿ, ಮೀನುಗಾರರ ಸಂಘಟನೆಯ ನಾಯಕರಾಗಿ ಸೇವೆ ಸಲ್ಲಿಸಿದ ಅವರ ನಿರ್ಗಮನ ದುಃಖಕರ ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ʼಯು.ಆರ್.ಸಭಾಪತಿ ಜನಪರ ಹೋರಾಟದ ಮೂಲಕ ರಾಜಕಾರಣದ ಶಕ್ತಿಯನ್ನು ಪ್ರಚುರಪಡಿಸಿದ್ದರು. ಸಭಾಪತಿ ಅವರ ಶಾಸಕತ್ವದ ಅವಧಿಯಲ್ಲಿ, ಉಡುಪಿಯಲ್ಲಿ ಅನೇಕ ಜನಪರ ಕೆಲಸಗಳು ಆಗಿದ್ದು, ಪಕ್ಷಬೇಧ ಮರೆತು ಸರ್ವರನ್ನು ಗೌರವಿಸುತ್ತಿದ್ದರು. ಮೀನುಗಾರರು, ಶೇಂದಿ ತೆಗೆಯುವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ದುರ್ಬಲರ ಆಶಾಕಿರಣವಾಗಿ ಸಭಾಪತಿ ಕೆಲಸ ಮಾಡಿದ್ದರು. ಅವರ ನಿಧನದಿಂದ ಹಿರಿಯ ರಾಜಕಾರಣಿ ಒಬ್ಬರನ್ನು ಜಿಲ್ಲೆ ಕಳೆದುಕೊಂಡಿದೆ’

-ಕೋಟ ಶ್ರೀನಿವಾಸ ಪೂಜಾರಿ,
ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು

‘ಹಿರಿಯ ರಾಜಕಾರಣಿ ಮುತ್ಸದಿ ಹತ್ತು ವರ್ಷಗಳ ಕಾಲ ಉಡುಪಿ ಶಾಸಕ ರಾಗಿದ್ದು ಉಡುಪಿಯ ಅಭಿವೃದ್ಧಿಯ ಹರಿಕಾರ ಜನನುರಾಗಿ ಜನ ಮೆಚ್ಚಿದ ಕಾಂಗ್ರೆಸ್ ನಾಯಕ ಯು.ಆರ್.ಸಭಾಪತಿಯವರು ನಿಧನರಾಗಿರುವುದು ಅತ್ಯಂತ ಬೇಸರದ ಸಂಗತಿ. ಈ ಬಗ್ಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ತೀವ್ರ ಸಂತಾಪ ವ್ಯಕ್ತಪಡಿಸಿ ಶ್ರದ್ಧಾಂಜಲಿಯನ್ನು ಅರ್ಪಿಸುತ್ತದೆ’
-ಅಶೋಕ್ ಕುಮಾರ್ ಕೊಡವೂರು, ಅಧ್ಯಕ್ಷರು
ಉಡುಪಿ ಜಿಲ್ಲಾ ಕಾಂಗ್ರೆಸ್

share
Next Story
X