2,000 ರೂ. ನೋಟುಗಳನ್ನು ಬದಲಾಯಿಸುವಾಗ ಯಾವುದೇ ಫಾರ್ಮ್ ಅಥವಾ ಸ್ಲಿಪ್ ಅಗತ್ಯವಿಲ್ಲ: ಎಸ್ ಬಿಐ ಸ್ಪಷ್ಟನೆ
ಹೊಸದಿಲ್ಲಿ: 2,000 ರೂ. ನೋಟುಗಳನ್ನು ಬದಲಾಯಿಸುವಾಗ ಅಥವಾ ಠೇವಣಿ ಇಡುವಾಗ ಯಾವುದೇ ಫಾರ್ಮ್ ಅಥವಾ ಸ್ಲಿಪ್ ಅಗತ್ಯವಿದೆಯೇ ಎಂಬ ಕುರಿತ ಊಹಾಪೋಹಗಳಿಗೆ ತೆರೆ ಎಳೆದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(State Bank Of India) ಇಂದು ತನ್ನ ಎಲ್ಲಾ ಶಾಖೆಗಳಿಗೆ ಮಾರ್ಗಸೂಚಿಯನ್ನು ಹೊರಡಿಸಿದೆ.
"ಯಾವುದೇ ರಿಕ್ವಿಸಿಷನ್ ಸ್ಲಿಪ್ ಪಡೆಯದೆ" 2000 ರೂ.ನೋಟನ್ನು ಬದಲಾಯಿಸಲು, ಠೇವಣಿ ಇಡಲು ಅನುಮತಿಸಲಾಗುವುದು ಎಂದು ಎಸ್ ಬಿಐ ಹೇಳಿದೆ.
ಒಟ್ಟು 20,000 ಮೌಲ್ಯದ 2,000 ರೂ. ನೋಟುಗಳನ್ನು ಒಂದೇ ಬಾರಿಗೆ ಠೇವಣಿ ಮಾಡಬಹುದು ಅಥವಾ ವಿನಿಮಯ ಮಾಡಿಕೊಳ್ಳಬಹುದು ಎಂದು ಮಾರ್ಗಸೂಚಿ ಪುನರುಚ್ಚರಿಸಿದೆ.
ನಿಷೇಧಿತ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಆಧಾರ್ ಕಾರ್ಡ್ನಂತಹ ಗುರುತಿನ ದಾಖಲೆಗಳನ್ನು ಸಲ್ಲಿಸುವುದರೊಂದಿಗೆ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಪ್ಪಾದ ಮಾಹಿತಿ ಹರಿದಾಡುತ್ತಿರುವ ನಡುವೆ ಈ ಸ್ಪಷ್ಟೀಕರಣ ನೀಡಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ 2,000 ರೂ. ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಹೇಳಿದೆ. ಜನತೆಯು ಸೆಪ್ಟೆಂಬರ್ 30 ರೊಳಗೆ ಅವುಗಳನ್ನು ಬದಲಾಯಿಸಬಹುದು ಅಥವಾ ತಮ್ಮ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಮಾಡಬಹುದು ಎಂದು ತಿಳಿಸಿದೆ.
ಮೇ 23 ರಿಂದ ಕಡಿಮೆ ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (RBI) 19 ಪ್ರಾದೇಶಿಕ ಕಚೇರಿಗಳು ಹಾಗೂ ಇತರ ಬ್ಯಾಂಕ್ಗಳು 2,000 ರೂ. ತೆಗೆದುಕೊಳ್ಳುವುದನ್ನು ಆರಂಭಿಸುತ್ತವೆ. ಅವು ಕಾನೂನುಬದ್ಧವಾಗಿ ಉಳಿಯುತ್ತವೆ ಎಂದು ಆರ್ಬಿಐ ತಿಳಿಸಿದೆ.