ಐಪಿಎಲ್: ಹೈದರಾಬಾದ್‌ಗೆ ಸೋಲುಣಿಸಿದ ಮುಂಬೈ; ಪ್ಲೇ-ಆಫ್ ಅವಕಾಶ ಹೆಚ್ಚಳ
ಕ್ಯಾಮರೂನ್ ಗ್ರೀನ್ ಆಕರ್ಷಕ ಶತಕ, ರೋಹಿತ್ ಶರ್ಮಾ ಅರ್ಧಶತಕ

ಮುಂಬೈ, ಮೇ 21: ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಚೊಚ್ಚಲ ಶತಕ(ಔಟಾಗದೆ 100, 47 ಎಸೆತ, 8 ಬೌಂಡರಿ, 8 ಸಿಕ್ಸರ್) ಹಾಗೂ ನಾಯಕ ರೋಹಿತ್ ಶರ್ಮಾ (56 ರನ್, 37 ಎಸೆತ, 8 ಬೌಂಡರಿ, 1 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್‌ನ 69ನೇ ಪಂದ್ಯವನ್ನು 8 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿತು.
ಈ ಮೂಲಕ 14ನೇ ಪಂದ್ಯದಲ್ಲಿ 8ನೇ ಗೆಲುವು ದಾಖಲಿಸಿದ ಮುಂಬೈ ಒಟ್ಟು 16 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದಿದೆ. ಪ್ಲೇ ಆಫ್ ಸುತ್ತಿಗೇರುವ ಅವಕಾಶವನ್ನು ಹೆಚ್ಚಿಸಿಕೊಂಡಿದೆ. ರಾಜಸ್ಥಾನ ರಾಯಲ್ಸ್ ತಂಡ ಇದೀಗ ಸ್ಪರ್ಧೆಯಿಂದ ಹೊರನಡೆದಿದ್ದು, ಮುಂಬೈ ತಂಡವು ಪ್ಲೇ ಆಫ್‌ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಳ್ಳಲು ಆರ್‌ಸಿಬಿ-ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದ ಫಲಿತಾಂಶದ ತನಕ ಕಾಯಬೇಕು. ಆರ್‌ಸಿಬಿ ಸೋತರೆ ಇಲ್ಲವೇ ಪಂದ್ಯವು ಮಳೆಗಾಹುತಿಯಾದರೆ ಮುಂಬೈನ ಮುಂದಿನ ಹಾದಿ ಸುಗಮವಾಗುತ್ತದೆ. ಸದ್ಯ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಿರುವ ಕಾರಣ ಪಂದ್ಯ ಆರಂಭ ವಿಳಂಬವಾಗುತ್ತಿದೆ.
ರವಿವಾರ ಟಾಸ್ ಜಯಿಸಿದ ಮುಂಬೈ ನಾಯಕ ರೋಹಿತ್ ಶರ್ಮಾ ಹೈದರಾಬಾದ್ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿದರು. ಹೈದರಾಬಾದ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ ಬರೋಬ್ಬರಿ 200 ರನ್ ಗಳಿಸಿತು. ಗೆಲ್ಲಲು 201 ರನ್ ಗುರಿ ಪಡೆದ ಆತಿಥೇಯ ಮುಂಬೈ 18 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟದಲ್ಲಿ ಗೆಲುವಿನ ದಡ ಸೇರಿತು.
ಮುಂಬೈ ಆರಂಭಿಕ ಬ್ಯಾಟರ್ ಇಶಾನ್ ಕಿಶನ್(14 ರನ್)ಅಲ್ಪ ಮೊತ್ತಕ್ಕೆ ಔಟಾದರು. ಆಗ ಜೊತೆಯಾದ ರೋಹಿತ್ ಹಾಗೂ ಗ್ರೀನ್ 2ನೇ ವಿಕೆಟ್‌ಗೆ 128 ರನ್ ಜೊತೆಯಾಟ ನಡೆಸಿದರು. ರೋಹಿತ್ ಔಟಾದ ನಂತರ ಸೂರ್ಯಕುಮಾರ ಯಾದವ್(ಔಟಾಗದೆ 25 ರನ್, 16 ಎಸೆತ)ಜೊತೆ ಕೈಜೋಡಿಸಿದ ಗ್ರೀನ್ 3ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 53 ರನ್ ಸೇರಿಸಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮೊದಲು ಆರಂಭಿಕ ಬ್ಯಾಟರ್‌ಗಳಾದ ಮಯಾಂಕ್ ಅಗರ್ವಾಲ್(83 ರನ್, 46 ಎಸೆತ, 8 ಬೌಂಡರಿ,4 ಸಿಕ್ಸರ್)ಹಾಗೂ ವಿವ್ರಂತ್ ಶರ್ಮಾ(69 ರನ್, 47 ಎಸೆತ, 9 ಬೌಂಡರಿ, 2 ಸಿಕ್ಸರ್)ಮೊದಲ ವಿಕೆಟ್‌ಗೆ 13.5 ಓವರ್‌ಗಳಲ್ಲಿ 140 ರನ್ ಗಳಿಸಿ ಹೈದರಾಬಾದ್‌ಗೆ ಭರ್ಜರಿ ಆರಂಭ ಒದಗಿಸಿಕೊಟ್ಟರು. ಆದರೆ ಈ ಇಬ್ಬರು ಹೊರತುಪಡಿಸಿ ಬೇರ್ಯಾವ ಬ್ಯಾಟ್ಸ್‌ಮನ್ ದೊಡ್ಡ ಮೊತ್ತ ಕಲೆ ಹಾಕಲಿಲ್ಲ.
16 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿದ್ದ ಹೈದರಾಬಾದ್ ಮೂರು ವಿಕೆಟ್‌ಗಳನ್ನು ಕಳೆದುಕೊಂಡು, ಕೊನೆಯ 4 ಓವರ್‌ಗಳಲ್ಲಿ ಕೇವಲ 32 ರನ್ ಗಳಿಸಲಷ್ಟೇ ಶಕ್ತವಾಯಿತು. ಮುಂಬೈ ಪರ ಆಕಾಶ್ ಮಧ್ವಾಲ್(4-37)ಅತ್ಯುತ್ತಮ ಬೌಲಿಂಗ್‌ನ ಮೂಲಕ ಗೆಲ್ಲಲೇಬೇಕಾದ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು 200 ರನ್‌ಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು.