ಗಾಯಾಳುಗಳನ್ನು ದಾಖಲಿಸಿಕೊಳ್ಳುವಲ್ಲಿ ವಿಳಂಬ ಆರೋಪ: ಖಾಸಗಿ ಆಸ್ಪತ್ರೆ ವಿರುದ್ಧ ತನಿಖೆಗೆ ಆದೇಶಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ‘ವಿಧಾನಸೌಧ ಸಮೀಪದ ಕೆ.ಆರ್.ವೃತ್ತದ ಅಂಡರ್ ಪಾಸ್ ಬಳಿ ಮಳೆ ನೀರಿನಲ್ಲಿ ಸಿಲುಕಿದ ಗಾಯಾಳುಗಳಾಗಿದ್ದವರನ್ನು ತಕ್ಷಣ ದಾಖಲಿಸಿಕೊಳ್ಳದೆ ವಿಳಂಬ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಇಲ್ಲಿನ ಖಾಸಗಿ ಆಸ್ಪತ್ರೆ ವಿರುದ್ಧ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ.
ರವಿವಾರ ಮಳೆಯ ಅನಾಹುತದ ಮಾಹಿತಿ ದೊರೆಯುತ್ತಿದ್ದಂತೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹಾಗೂ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಜೊತೆ ತುರ್ತು ಸಭೆ ನಡೆಸಿ ಅಗತ್ಯ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು. ಬಳಿಕ ಖುದ್ದು ಸ್ಥಳ ಪರಿಶೀಲನೆ ನಡೆಸಿದ ಸಿದ್ದರಾಮಯ್ಯ, ಆಸ್ಪತ್ರೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳಿದರು.
‘ಮಳೆಯಿಂದ ಉರುಳಿ ಬಿದ್ದಿರುವ ಮರಗಳನ್ನು ತಕ್ಷಣ ತೆರವುಗೊಳಿಸಬೇಕು. ಮಳೆ ಅನಾಹುತದಿಂದ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ಪರಿಹಾರ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ತೋರಿ ಸಾರ್ವಜನಿಕರಿಗೆ ತೊಂದರೆಯಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
5 ಲಕ್ಷ ರೂ. ಪರಿಹಾರ: ‘ಅಂಡರ್ ಪಾಸ್‍ನ ಮಳೆ ನೀರಿನಲ್ಲಿ ಸಿಲುಕಿ ಸಾವನ್ನಪ್ಪಿದ ಭಾನುರೇಖಾ(23) ಅವರ ಕುಟುಂಬ ವರ್ಗದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೃತರ ಕುಟುಂಬಕ್ಕೆ ಸರಕಾರದ ವತಿಯಿಂದ 5ಲಕ್ಷ ರೂ.ಪರಿಹಾರ ನೀಡಲಾಗುವುದು. ಅಲ್ಲದೆ, ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರಕಾರವೇ ಭರಿಸಲಿದೆ ಎಂದು ಹೇಳಿದರು.
‘ಈ ಕುಟುಂಬ ಆಂಧ್ರದ ವಿಜಯವಾಡದವರು. ಬೆಂಗಳೂರು ನಗರ ನೋಡಲು ಕಾರನ್ನು ಬಾಡಿಗೆಗೆ ತೆಗೆದುಕೊಂಡು ಬಂದಿದ್ದರು. ಚಾಲಕ ಸೇರಿ ಒಟ್ಟು 7 ಮಂದಿ ಕಾರಿನಲ್ಲಿ ಇದ್ದರು. ಸಂಚಾರ ಪೊಲೀಸರು ಅಂಡರ್ ಪಾಸ್ ಬಳಿ ಬ್ಯಾರಿಕೇಡ್ ಹಾಕಿದ್ದರು. ಆದರೆ, ಮಳೆ ಹಾಗೂ ಗಾಳಿಯಿಂದಾಗಿ ಆ ಬ್ಯಾರಿಕೇಡ್ ಬಿದ್ದು ಹೋಗಿದೆ ಎಂದು ಅವರು ಹೇಳಿದರು.
ಚಾಲಕ ಅಂಡರ್ ಪಾಸ್‍ನಲ್ಲಿ ಹೋಗಬಾರದಿತ್ತು. ಕಾರು ಒಳಗೆ ಬರುತ್ತಿದ್ದಂತೆ ನೀರು ತುಂಬಿಕೊಂಡಿದೆ. ಬಾಗಿಲುಗಳು ತೆರೆಯಲು ಆಗಿಲ್ಲ. ಭಾನುರೇಖಾ ಈ ವೇಳೆ ಮಳೆ ನೀರು ಕುಡಿದು ಬಿಟ್ಟಿದ್ದಾರೆ. ಆಕೆಯನ್ನು ಇಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬರುವ ವೇಳೆಗೆ ಅಸುನೀಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಅಂಡರ್ ಪಾಸ್‍ನಲ್ಲಿ ನೀರು ನಿಲ್ಲದಂತೆ ಕ್ರಮಕೈಗೊಳ್ಳಬೇಕು. ಸಂಚಾರ ಪೊಲೀಸರು ಎಚ್ಚರ ವಹಿಸಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.
ರಾಜಾಕಾಲುವೆಗಳನ್ನು ದುರಸ್ತಿ ಮಾಡುವ ಕೆಲಸವನ್ನು ಈ ಹಿಂದಿನ ನಮ್ಮ ಸರಕಾರ ಮಾಡಿತ್ತು. ಇನ್ನೂ ಅರ್ಧ ಕೆಲಸ ಬಾಕಿಯಿತ್ತು. ಆದರೆ, ಬಿಜೆಪಿ ಸರಕಾರ ಈ ನಿಟ್ಟಿನಲ್ಲಿ ಏನು ಕೆಲಸ ಮಾಡಿಲ್ಲ. ಆದಷ್ಟು ಬೇಗ, ಈ ನಿಟ್ಟಿನಲ್ಲಿ ಆದ್ಯತೆ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
.jpg)
.jpg)