ನವಿಲಿನ ಗರಿ ಕಿತ್ತು ಚಿತ್ರಹಿಂಸೆ ನೀಡುವ ವಿಡಿಯೋ ವೈರಲ್: ವ್ಯಾಪಕ ಆಕ್ರೋಶ

ಹೊಸದಿಲ್ಲಿ: ಕಿಡಿಗೇಡಿಯೊಬ್ಬ ನವಿಲೊಂದರ ಗರಿಗಳನ್ನು ಕಿತ್ತುಹಾಕುವ ಮೂಲಕ ಚಿತ್ರಹಿಂಸೆ ನೀಡುತ್ತಿರುವುದನ್ನು ತೋರಿಸುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿವಾದವನ್ನು ಸೃಷ್ಟಿಸಿದೆ. ಮೊಬೈಲ್ಫೋನ್ ಕ್ಯಾಮರಾದ ಮೂಲಕ ಚಿತ್ರೀಕರಿಸಲಾದ ಈ ವೀಡಿಯೊವನ್ನು ಮಧ್ಯಪ್ರದೇಶದ ಕಾತ್ನಿಯಲ್ಲಿ ತೆಗೆಯಲಾಗಿತ್ತು ಎನ್ನಲಾಗಿದೆ.
ವಿವಿಧ ವೇದಿಕೆಗಳಲ್ಲಿ ಸಾಮಾಜಿಕ ಮಾಧ್ಯಮಗಳ ಪ್ರೊಫೈಲ್ನಲ್ಲಿ ವ್ಯಕ್ತಿಯು ವಿಡಿಯೋವನ್ನು ಶೇರ್ ಮಾಡಿದ್ದಾನೆ. ನವಿಲಿಗೆ ಚಿತ್ರಹಿಂಸೆ ನೀಡಿದವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಅವರನ್ನು ಕಠಿಣ ಕಾನೂನುಕ್ರಮಕ್ಕೆ ಗುರಿಪಡಿಸಬೇಕೆಂದು ಹಲವು ನೆಟ್ಟಿಗರು ಜಾಲತಾಣಗಳಲ್ಲಿ ಆಗ್ರಹಿಸಿದ್ದಾರೆ.
ವೀಡಿಯೊದಲ್ಲಿ, ಒಬ್ಬ ವ್ಯಕ್ತಿಯು ನವಿಲೊಂದರ ಗರಿಗಳನ್ನು ಯಾತನಾಮಯವಾದ ರೀತಿಯಲ್ಲಿ ಕಿತ್ತುಹಾಕುತ್ತಿರುವುದನ್ನು ತೋರಿಸಲಾಗಿದೆ. ಪಕ್ಕದಲ್ಲೇ ಕುಳಿತಿರುವ ಆತನ ಗೆಳೆಯನು ಅದನ್ನು ವೀಕ್ಷಿಸುತ್ತಿದ್ದು, ಇನ್ನೋರ್ವ ವ್ಯಕ್ತಿ ಈ ದೃಶ್ಯವನ್ನು ಚಿತ್ರೀಕರಿಸುತ್ತಿರುವುದು ಕಂಡುಬಂದಿದೆ.
ವೀಡಿಯೊದಲ್ಲಿ ಕಂಡುಬಂದಿರುವ ಬೈಕೊಂದರ ನಂಬರ್ಪ್ಲೇಟ್ ನ ಆಧಾರದಲ್ಲಿ ಪೊಲೀಸರು ವ್ಯಕ್ತಿಯನ್ನು ಗುರುತಿಸುವಲ್ಲಿ ಸಫಲರಾಗಿದ್ದಾರೆ. ಆರೋಪಿಗಳ ಮೇಲೆ ನಿಗಾವಿರಿಸುವಂತೆ ಪೊಲೀಸರು ಸ್ಥಳೀಯರು ಹಾಗೂ ಮಾಧ್ಯಮಗಳನ್ನು ಕೇಳಿಕೊಂಡಿದ್ದಾರೆ







