ಕರ್ನಾಟಕ ಚುನಾವಣೆ ದೇಶದ ಜನರಲ್ಲಿ ಭರವಸೆಯ ಕಿರಣ ಮೂಡಿಸಿದೆ: ಮೆಹಬೂಬ ಮುಫ್ತಿ

ಬೆಂಗಳೂರು: ಇತ್ತೀಚೆಗಷ್ಟೇ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ‘ಫ್ಯಾಸಿಸ್ಟ್, ಕೋಮುವಾದಿ ಮತ್ತು ವಿಭಜಕ’ ಬಿಜೆಪಿಯನ್ನು ಸೋಲಿಸುವ ಮೂಲಕ ಇಡೀ ದೇಶದ ಜನರಲ್ಲಿ ಭರವಸೆಯ ಆಶಾಕಿರಣ ಮೂಡಿಸಿದೆ’ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಹೇಳಿದ್ದಾರೆ.
ರವಿವಾರ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿ ಮಾತನಾಡಿದ ಅವರು, ‘ಎಐಸಿಸಿ ಮುಖಂಡ ರಾಹುಲ್ ಗಾಂಧಿ ಅವರ ‘ಭಾರತ್ ಜೋಡೋ ಯಾತ್ರೆ’ ರಾಜ್ಯದ ಗೆಲುವಿಗೆ ಅಡಿಪಾಯ ಹಾಕಿತು. ರಾಜ್ಯವು ಪ್ರಜಾಪ್ರಭುತ್ವಕ್ಕೆ ಮತ್ತೊಮ್ಮೆ ಅವಕಾಶ ನೀಡಿದೆ. ಈಗ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಒಳ್ಳೆಯ ಆಡಳಿತವನ್ನು ನೀಡಲಿದ್ದಾರೆ’ ಎಂದು ಭರವಸೆ ವ್ಯಕ್ತಪಡಿಸಿದರು.
‘ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಎಲ್ಲ ನಾಯಕರೂ ಚುನಾವಣೆಯಲ್ಲಿ ಧರ್ಮದ ವಿಷಯಗಳನ್ನು ಪ್ರಸ್ತಾಪಿಸಿದ್ದರೂ, ಶೇ.60ರಷ್ಟು ಮಂದಿ ಬಿಜೆಪಿ ವಿರುದ್ಧ ಮತ ಚಲಾಯಿಸಿದ್ದಾರೆ. ಕರ್ನಾಟಕದ ಜನತೆ ಅದನ್ನು ತಿರಸ್ಕರಿಸಿ ದೇಶಕ್ಕೆ ಹೊಸ ಭರವಸೆ ನೀಡಿದ್ದಾರೆ’ ಎಂದು ಅವರು ವಿಶ್ಲೇಷಿಸಿದರು.
ದೇಶದ ಉಳಿವಿನ ದೃಷ್ಟಿಯಲ್ಲಿ ಇತರ ಎಲ್ಲ ಪಕ್ಷಗಳಿಗಿಂತ ಕಾಂಗ್ರೆಸ್‍ಗೆ ಹೆಚ್ಚಿನ ಜವಾಬ್ದಾರಿಯಿದೆ. ಕಾಂಗ್ರೆಸ್ ತ್ಯಾಗಕ್ಕೂ ಮುಂದಾಗಬೇಕು. ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ತಾನು ಎಲ್ಲಿ ಬಲಿಷ್ಠವಿದೆಯೋ, ಅಲ್ಲಿ ದೊಡ್ಡ ಪಾತ್ರವನ್ನು, ಹಾಗೆ ಪ್ರಾದೇಶಿಕ ಪಕ್ಷಗಳು ಬಲಿಷ್ಠವಾಗಿರುವಲ್ಲಿ ಕಿರಿಯ ಪಾತ್ರ ನಿರ್ವಹಿಸಬೇಕು ಎಂದು ಮುಫ್ತಿ ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವು ಫೆಡರಲಿಸಂಗೆ ಅತ್ಯುತ್ತಮ ಉದಾಹರಣೆಯಾಗಿದೆ. ಆದರೆ ಆರ್ಟಿಕಲ್ 370 ಅನ್ನು ರದ್ದುಗೊಳಿಸುವ ಮೂಲಕ ರಾಜ್ಯವನ್ನು ವಿಭಜಿಸಿ ಅಂಗವಿಕಲಗೊಳಿಸಲಾಯಿತು. ಜಮ್ಮು ಮತ್ತು ಕಾಶ್ಮೀರವು ಬಯಲು ಜೈಲು ಆಗಿ ಮಾರ್ಪಟ್ಟಿದೆ ಎಂದರು.
ಜಮ್ಮು ಮತ್ತು ಕಾಶ್ಮೀರ ವಿಷಯದಲ್ಲಿ ಈ ಮೊದಲು ಕೇವಲ ಪಾಕಿಸ್ತಾನ ಮಾತ್ರ ಹಸ್ತಕ್ಷೇಪ ಮಾಡುತ್ತಿತ್ತು. ಆದರೆ ಇದೀಗ ಚೀನಾ ಹಸ್ತಕ್ಷೇಪ ಮಾಡುತ್ತಿದೆ. 370ನೆ ವಿಧಿಯನ್ನು ತೆಗೆದುಹಾಕುವ ಮೂಲಕ ಬಿಜೆಪಿ ಈ ರೀತಿ ಮಾಡಿದ್ದಾರೆ. ಸಂವಿಧಾನದಲ್ಲಿ 370ನೆ ವಿಧಿಯನ್ನು ಮರುಸ್ಥಾಪಿಸುವವರೆಗೆ ತಾನು ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಅವರು ಹೇಳಿದರು.
ಕಾಶ್ಮೀರದಲ್ಲಿ ಮೇ 22ರಿಂದ ಮೇ 24ರ ವರೆಗೆ ಜಿ-20ಯ ಪ್ರವಾಸೋದ್ಯಮ ಸಭೆ ಆಯೋಜಿಸುತ್ತಿರುವುದಕ್ಕೆ ನನ್ನ ವಿರೋಧವಿಲ್ಲ. ಆದರೆ ಈ ಸಭೆ ಪ್ರಚಾರದ ಗಿಮಿಕ್ ಅಷ್ಟೆ. ಈ ಸಭೆಯನ್ನು ಬಿಜೆಪಿ ಹೈಜಾಕ್ ಮಾಡಿದೆ. ಜಿ-20 ಲಾಂಛನ ಕಮಲದ ರೀತಿ ಇದೆ. ಲಾಂಛನವು ದೇಶಕ್ಕೆ ಸಂಬಂಧಪಟ್ಟಂತೆ ಇರಬೇಕು. ಅದನ್ನು ಬಿಟ್ಟು ಬಿಜೆಪಿಯ ಚಿಹ್ನೆ ಕಮಲದಂತೆ ಇದೆ ಎಂದು ದೂರಿದರು.