ಚತ್ತೀಸ್ಗಢ: ಮೂವರು ಮಾವೋವಾದಿಗಳ ಬಂಧನ; ರಸ್ತೆಯಲ್ಲಿ ಹುದುಗಿಸಿದ್ದ ಐಇಡಿ ವಶ

ಹೊಸದಿಲ್ಲಿ,ಮೇ 21: ಚತ್ತೀಸ್ಗಢದ ಕಾಂಕೇರ್ ಜಿಲ್ಲೆಯಲ್ಲಿ ಭದ್ರತಾಪಡೆಗಳು ಮೂವರು ಮಾವೋವಾದಿಗಳನ್ನು ಬಂಧಿಸಿದ್ದು, ಅವರು ರಸ್ತೆಯೊಂದರಲ್ಲಿ ಹುದುಗಿಸಿಟ್ಟಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ)ವನ್ನು ವಶಪಡಿಸಿಕೊಳ್ಳಲಾಗಿದೆಯೆಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಇಬ್ಬರು ಆರೋಪಿಗಳ ತಲೆಗಳಿಗೆ ತಲಾ 8 ಲಕ್ಷ ರೂ.ಗಳ ಬಹುಮಾನ ಘೋಷಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಜಿಲ್ಲಾ ಮೀಸಲುದಳ ಹಾಗೂ ಚಿಲ್ಪಾರಸ್ನ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ 30ನೇ ಬೆಟಾಲಿಯನ್ ನಡೆಸಿದ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಈ ಮೂವರು ಮಾವೋವಾದಿಗಳನ್ನು ಬಂಧಿಸಲಾಗಿದೆ.
‘‘ಕೊಯಿಲಿಬೀಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅರಣ್ಯಪ್ರದೇಶದಲ್ಲಿ ಮೂವರು ವ್ಯಕ್ತಿಗಳು ಅಡ್ಡಾಡುತ್ತಿರುವುದನ್ನು ಭದ್ರತಾಪಡೆಗಳು ಕಾರ್ಯಾಚರಣೆಯ ಸಂದರ್ಭದಲ್ಲಿ ಪತ್ತೆಹಚ್ಚಿದ್ದಾರೆ. ಪೊಲೀಸರನ್ನು ಕಂಡ ಬಳಿಕ ಓಡಲು ಯತ್ನಿಸಿದ್ದ ಅವರನ್ನು ಬಂಧಿಸಲಾಗಿದೆಯೆಂದು ಪೊಲೀಸ್ ಅಧೀಕ್ಷಕ ಶಲಭ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ.
ಒಂದು ವಾಕಿಟಾಕಿ ಸೆಟ್, ಒಂದು ಟಾರ್ಚ್ ಹಾಗೂ 6 ಸಾವಿರ ರೂ. ನಗದನ್ನು ಬಂಧಿತರಿಂದ ವಶಪಡಿಸಿಕೊಳ್ಳಲಾಗಿದೆಯೆಂದು ಅವರು ಹೇಳಿದ್ದಾರೆ.
ಬಂಧಿತರು ನೀಡಿದ ಮಾಹಿತಿಯ ಆಧಾರದಲ್ಲಿ ಚಿಲಪಾರಸ್ ದತ್ತಾ ರಸ್ತೆಯಲ್ಲಿ , ವೈರ್ನೊಂದಿಗೆ ಸಂಪರ್ಕಿಸಿ ಇರಿಸಿದ್ದ ಸುಧಾರಿತ ಸ್ಪೋಟಕ ಸಾಧನ (ಐಇಡಿ)ವನ್ನು ಪತ್ತೆಹಚ್ಚಲಾಯಿತೆಂದು ಪೊಲೀಸರು ಇತಳಿಸಿದ್ದಾರೆ.
ಮೂವರು ಬಂಧಿತ ಮಾವೋವಾದಿಗಳನ್ನು ಕಾಂಕೆರ್ನ ಕೊಯಿಲಿಬೆಡಾ ಗ್ರಾಮದ ನಿವಾಸಿಗಳಾದ
ಪೀಲೂರಾಮ್ ಆಂಚಲಾ ಯಾನೆ ಸಾಲಿಕ್ ರಾಮ್ (35), ಪುನಾವು ರಾಮ ಮಾಂಡವಿ (22) ಹಾಗೂ ಬಿಜಾಪುರ್ನ ಪುನೇಮ್ ಯಾನೆ ಬುದ್ರು(25) ಎಂದು ಗುರುತಿಸಲಾಗಿದೆ.ಇವರಲ್ಲಿ ಪೀಲೂರಾಮ್ ಹಾಗೂ ಪುನೇಮ್ ಅವರ ತಲೆಗೆ 8 ಲಕ್ಷ ಬಹುಮಾನ ಘೋಷಿಸಲಾಗಿತ್ತು.







