ಹಣವಿಲ್ಲದ್ದಕ್ಕೆ ಹೆರಿಗೆಗೆ ನಿರಾಕರಿಸಿದ ವೈದ್ಯರು: ಪೊದೆಯಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ !
ಅಲಿಗಢ, ಮೇ 19: ಶುಲ್ಕ ಭರಿಸಲು ಸಾಧ್ಯವಾಗದೇ ಇದ್ದುದರಿಂದ ಹೆರಿಗೆ ಮಾಡಿಸಲು ವೈದ್ಯರು ನಿರಾಕರಿಸಿದ ಬಳಿಕ ಮಹಿಳೆಯೋರ್ವರು ಸಮೀಪದಲ್ಲೇ ಇದ್ದ ಪೊದೆಯಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಉತ್ತರಪ್ರದೇಶದ ಅಲಿಗಢದ ಹಬುದಾ ಮೊಹಲ್ಲಾದಲ್ಲಿ ನಡೆದಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮಹಿಳೆಯನ್ನು ಹೆರಿಗೆಗಾಗಿ ಇಗ್ಲಾಸ್ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆದರೆ, ಅವರನ್ನು ಇನ್ನೊಂದು ಆಸ್ಪತ್ರೆಗೆ ಕೆರೆದೊಯ್ಯುವಂತೆ ಸೂಚಿಸಲಾಗಿತ್ತು. ‘‘1 ಸಾವಿರ ರೂಪಾಯಿ ಪಾವತಿ ಮಾಡಲು ಸಾಧ್ಯವಾಗದೇ ಇರುವುದರಿಂದ ಆಸ್ಪತ್ರೆಯ ವೈದ್ಯರು ಹೆರಿಗೆ ಮಾಡಿಸಲು ನಿರಾಕರಿಸಿದರು’’ ಎಂದು ಮಹಿಳೆಯ ಕುಟುಂಬ ಆರೋಪಿಸಿದೆ.
ಪರಿಣಾಮವಾಗಿ ಮಹಿಳೆ ಸಮೀಪದಲ್ಲಿದ್ದ ಪೊದೆಯಲ್ಲಿ ಕುಟುಂಬದ ಸದಸ್ಯರ ನೆರವಿನಿಂದ ಮಗುವಿಗೆ ಜನ್ಮ ನೀಡಿದರು. ಈ ಘಟನೆಯನ್ನು ಕೆಲವರು ದೂರದಿಂದ ವೀಡಿಯೊ ರೆಕಾರ್ಡ್ ಮಾಡಿಕೊಂಡಿದ್ದರು. ಈ ವೀಡಿಯೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಅನಂತರ ವೈದ್ಯರ ಕ್ರಮದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಯಿತು.
ನಾವು ಶೂ ಹಾಗೂ ಚಪ್ಪಲಿ ತಯಾರಿ ಹಾಗೂ ದುರಸ್ಥಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ನಾವು ಮಹಿಳೆಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೆರಿಗೆಗೆ ಕರೆದೊಯ್ದಾಗ ವೈದ್ಯರು ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು. ಅವರು ನಮ್ಮಲ್ಲಿ ಹಣದ ಬೇಡಿಕೆಯನ್ನು ಕೂಡ ಇರಿಸಿದರು ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.