ಐಪಿಎಲ್: ಗಿಲ್ ಶತಕ, ಗುಜರಾತ್‌ಗೆ ಜಯ, ಆರ್‌ಸಿಬಿ ಪ್ಲೇಆಫ್ ಕನಸು ಭಗ್ನ

ಬೆಂಗಳೂರು, ಮೇ 21: ಆರಂಭಿಕ ಬ್ಯಾಟರ್ ಶುಭಮನ್ ಗಿಲ್(ಔಟಾಗದೆ 104 ರನ್, 52 ಎಸೆತ, 5 ಬೌಂಡರಿ, 8 ಸಿಕ್ಸರ್)ಶತಕ ಹಾಗೂ ವಿಜಯ್ ಶಂಕರ್(53 ರನ್, 35 ಎಸೆತ, 7 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ಕೊಡುಗೆಯ ನೆರವಿನಿಂದ ಐಪಿಎಲ್‌ನ 70ನೇ ಹಾಗೂ ಕೊನೆಯ ಲೀಗ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 6 ವಿಕೆಟ್‌ಗಳ ಅಂತರದಿಂದ ಮಣಿಸಿದೆ.
ಈ ಸೋಲಿನೊಂದಿಗೆ ಆರ್‌ಸಿಬಿಯ ಪ್ಲೇ-ಆಫ್ ಕನಸು ಭಗ್ನಗೊಂಡಿದೆ. ಮುಂಬೈ ಇಂಡಿಯನ್ಸ್ ಪ್ಲೇ-ಆಫ್‌ಗೆ ಲಗ್ಗೆ ಇಟ್ಟಿದೆ. ರವಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 198 ರನ್ ಗುರಿ ಬೆನ್ನಟ್ಟಿದ ಗುಜರಾತ್ 19.1 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿದೆ.
ಗಿಲ್ ಹಾಗೂ ಶಂಕರ್ 2ನೇ ವಿಕೆಟ್ ಜೊತೆಯಾಟದಲ್ಲಿ 123 ರನ್ ಜೊತೆಯಾಟ ನಡೆಸಿ ತಂಡಕ್ಕೆ ಗೆಲುವಿನ ವಿಶ್ವಾಸ ಹೆಚ್ಚಿಸಿದರು. ಆರ್‌ಸಿಬಿ ಪರ ಮುಹಮ್ಮದ್ ಸಿರಾಜ್(2-32) ಯಶಸ್ವಿ ಬೌಲರ್ ಎನಿಸಿಕೊಂಡರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಆರ್‌ಸಿಬಿ ತಂಡ ಆರಂಭಿಕ ಬ್ಯಾಟರ್ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಗಳಿಸಿದ ದಾಖಲೆಯ 7ನೇ ಶತಕದ(ಔಟಾಗದೆ 101 ರನ್, 61 ಎಸೆತ, 13 ಬೌಂಡರಿ, 1 ಸಿಕ್ಸರ್)ಸಹಾಯದಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 197 ರನ್ ಗಳಿಸಲು ಶಕ್ತವಾಯಿತು.