ವಿಧಾನಸಭೆ ಮೊದಲ ಅಧಿವೇಶನ | ಡಿಕೆಶಿ, ದೇವೇಗೌಡರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಶಾಸಕರು ಯಾರು?
ಅಕ್ಕ-ಪಕ್ಕದಲ್ಲೇ ಕುಳಿತ ಅಪ್ಪ-ಮಗ

ಬೆಂಗಳೂರು, ಮೇ 22: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರು ಸೇರಿದಂತೆ ಒಟ್ಟು 182 ಮಂದಿ ಶಾಸಕರು ವಿಧಾನಸಭೆಯ ನೂತನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಸೋಮವಾರ ಬೆಳಗ್ಗೆ 11:30ಕ್ಕೆ 16ನೆ ವಿಧಾನಸಭೆಯ ಮೊದಲ ಅಧಿವೇಶನವು ವಂದೇ ಮಾತರಂ ಗೀತೆಯೊಂದಿಗೆ ಆರಂಭವಾಯಿತು. ವಿಧಾನಸಭೆ ಹಂಗಾಮಿ ಸಭಾಧ್ಯಕ್ಷ ಆರ್.ವಿ.ದೇಶಪಾಂಡೆ ಅವರು, ನೂತನ ಸದಸ್ಯರು ಪ್ರಮಾಣವಚನ ಸ್ವೀಕರಿಸಲು ಅನುವು ಮಾಡಿಕೊಟ್ಟಾಗ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರು ಮೊದಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಮಾಣ ವಚನ ಸ್ವೀಕರಿಸಲು ಆಹ್ವಾನಿಸಿದರು.
ವರುಣಾ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿರುವ ಸಿದ್ದರಾಮಯ್ಯ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಭಾಧ್ಯಕ್ಷರಿಗೆ ವಂದಿಸಿ ಪ್ರತಿಪಕ್ಷದ ಸಾಲಿನಲ್ಲಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತಿತರ ಸದಸ್ಯರಿಗೆ ಹಸ್ತಲಾಘವ ಮಾಡಿ ಸ್ವಸ್ಥಾನಕ್ಕೆ ಮರಳಿದರು. ಆನಂತರ, ಕನಕಪುರ ಕ್ಷೇತ್ರದಿಂದ ಆಯ್ಕೆಯಾದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗಂಗಾಧರಯ್ಯ ಅಜ್ಜಯ್ಯ ಹೆಸರಿನಲ್ಲಿ ಪ್ರಮಾಣ ಮಾಡಿ ಸತ್ಯನಿಷ್ಠೆಯ ಪ್ರತಿಜ್ಞೆ ಮಾಡಿದರು.
ಸಚಿವರಾದ ಎಂ.ಬಿ.ಪಾಟೀಲ್ ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ, ಡಾ.ಜಿ. ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಕೆ.ಜೆ.ಜಾರ್ಜ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ ಮತ್ತು ರಾಮಲಿಂಗಾರೆಡ್ಡಿ ಅವರು ಸತ್ಯನಿಷ್ಠೆ ಹೆಸರಿನಲ್ಲಿ ವಿಧಾನಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ತದನಂತರ, ಬಸವರಾಜ ಬೊಮ್ಮಾಯಿ ಅವರು ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಅದೇ ರೀತಿ, ವಿಧಾನಸಭೆ ಸದಸ್ಯರಾಗಿ ಕೆ.ಎನ್.ರಾಜಣ್ಣ, ಅಲ್ಲಮ ಪ್ರಭು ಪಾಟೀಲ್, ಕೆ.ಎಸ್.ಆನಂದ್, ಅರವಿಂದ್ ಬೆಲ್ಲದ್, ಆರ್.ಅಶೋಕ್, ಆರಗ ಜ್ಞಾನೇಂದ್ರ, ಅಶೋಕ್ ಪಟ್ಟಣ್, ಅಶೋಕ್ ಕುಮಾರ್ ರೈ, ಬಾಬಾ ಸಾಹೇಬ್ ಪಾಟೀಲ್, ಅವಿನಾಶ್ ಜಾದವ್, ಡಾ.ಅಜಯ್ ಧರ್ಮಸಿಂಗ್, ಬಸವನಗೌಡ ತುರುವಿಹಾಳ್. ಬಸವರಾಜ ರಾಯರೆಡ್ಡಿ, ಬಸನವಗೌಡ ಗದ್ದಲ್, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವರು ಪ್ರಮಾಣ ವಚನ ಸ್ವೀಕರಿಸಿದರು.
ರಾಜ್ಯ ವಿಧಾನಸಭೆಯ 224 ಸದಸ್ಯರ ಪೈಕಿ ಇನ್ನೂ 42 ಮಂದಿ ಪ್ರಮಾಣ ವಚನ ಸ್ವೀಕರಿಸಬೇಕಿದ್ದು, ನಾಳೆ(ಮೇ 23) ಬೆಳಗ್ಗೆ 11 ಗಂಟೆಗೆ ಸದನ ಸೇರಿದ ಬಳಿಕ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಮುಂದುವರಿಯಲಿದೆ. ಇಂದು ಸದನಕ್ಕೆ ಗೈರು ಹಾಜರಾಗಿರುವ ಸದಸ್ಯರು ನಾಳೆ ಪ್ರಮಾಣ ವಚನ ಸ್ವೀಕರಿಸುವಂತೆ ಹಂಗಾಮಿ ಸ್ಪೀಕರ್ ಆರ್.ವಿ.ದೇಶಪಾಂಡೆ ಮನವಿ ಮಾಡಿ, ಸದನವನ್ನು ನಾಳೆ(ಮೇ 23)ಗೆ ಸೇರುವಂತೆ ಮುಂದೂಡಿದರು.
ಡಿಕೆಶಿ ಹೆಸರಿನಲ್ಲಿ ಪ್ರಮಾಣ: ‘ಹಸಿರು ಶಾಲು ಹಾಕಿಕೊಂಡಿದ್ದ ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ನೂತನ ಶಾಸಕ ಬಸವರಾಜ ಶಿವಗಂಗಾ ಅವರು, ಭಗವಂತ ಹಾಗೂ ಆರಾಧ್ಯ ದೈವ ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕುಣಿಗಲ್ ಕ್ಷೇತ್ರದ ಶಾಸಕ ಡಾ.ರಂಗನಾಥ್ ಅವರು ಡಿ.ಕೆ. ಶಿವಕುಮಾರ್, ದುರ್ಗಯ್ಯ, ರೈತ ಹಾಗೂ ಭಗವಂತನ ಹೆಸರಿನಲ್ಲಿ, ದರ್ಶನ್ ಪುಟ್ಟಣ್ಣಯ್ಯ ಅವರು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಿದ್ದು, ಅವರು ಸಂವಿಧಾನದ ಹೆಸರಿನಲ್ಲಿ, ದರ್ಶನ್ ಧ್ರುವನಾರಾಯಣ್ ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಗೋಮಾತೆ ಹೆಸರಿನಲ್ಲಿ ಯತ್ನಾಳ್..!: ‘ವಿಶೇಷವಾಗಿ ವಿಜಯಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ‘ಹಿಂದುತ್ವ ಹಾಗೂ ಗೋಮಾತೆ’ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಇಂಗ್ಲಿಷ್, ಬಸವಣ್ಣ ಹೆಸರಿನಲ್ಲಿ ಪ್ರಮಾಣ..!: ‘ಬೆಳಗಾವಿ ಉತ್ತರ ಕ್ಷೇತ್ರದಿಂದ ಚುನಾಯಿತರಾದ ಆಸೀಫ್‍ಸೇಠ್, ಬೀದರ್‍ನ ರಹೀಮ್ ಖಾನ್, ಹುಕ್ಕೇರಿಯ ನಿಖಿಲ್ ಉಮೇಶ್, ಕನೀಝ್ ಫಾತಿಮಾ, ಎಚ್.ಎ. ಇಕ್ಬಾಲ್ ಹುಸೇನ್ ಇಂಗ್ಲಿಷ್ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಶಿವಾನಂದ ಪಾಟೀಲ್ ಅಣ್ಣ ಬಸವಣ್ಣನವರ ಹೆಸರಿನಲ್ಲಿ, ಅಶೋಕ್ ಮನಗುಳಿ ಅವರು ಮನೆದೇವರು, ತಂದೆ-ತಾಯಿ, ಕ್ಷೇತ್ರದ ಜನರು ಹಾಗೂ ಸತ್ಯನಿಷ್ಠೆ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಗಮನ ಸೆಳೆದರು. ಅದೇ ರೀತಿ, ಹೊಸದಾಗಿ ಆಯ್ಕೆಯಾದ ಸುಳ್ಯ ಕ್ಷೇತ್ರದ ಭಾಗೀರಥಿ ಮರುಳ್ಯ ಅವರು ಕುಲದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಕೊಡಗು ಜಿಲ್ಲೆಯಿಂದ ಚುನಾಯಿತರಾಗಿರುವ ಡಾ.ಮಂತರ್ ಗೌಡ ಹಾಗೂ ಎ.ಎಸ್.ಪೊನ್ನಣ್ಣ ಕಾವೇರಮ್ಮ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪಿ.ಎಂ.ನರೇಂದ್ರ ಸ್ವಾಮಿ, ನಯನಾ ಮೋಟಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರಿನಲ್ಲಿ, ಪ್ರಕಾಶ್ ಕೋಳಿವಾಡ ಬುದ್ದ, ಬಸವ, ಅಂಬೇಡ್ಕರ್, ರೂಪಕಲಾ ಮುನಿಯಪ್ಪ ಅವರು ಬುದ್ಧ, ಬಸವ, ಅಂಬೇಡ್ಕರ್, ರೈತರು, ಕಾರ್ಮಿಕರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷ.
ದೇವೇಗೌಡರ ಹೆಸರಿನಲ್ಲಿ ಪ್ರಮಾಣ: ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸಮೃದ್ಧಿ ಮಂಜುನಾಥ್ ಅವರು ಎಚ್.ಡಿ.ದೇವೇಗೌಡರ ಹೆಸರಿನಲ್ಲಿ, ಎಚ್.ಡಿ.ತಮ್ಮಯ್ಯ, ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಕನಕದಾಸರ ಹೆಸರಿನಲ್ಲಿ, ವೇದವ್ಯಾಸ ಕಾಮತ್ ಅವರು ಭಾರತ ಮಾತೆ ಹಾಗೂ ತುಳುನಾಡಿನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಶರತ್ ಬಚ್ಚೇಗೌಡ ಸಂವಿಧಾನದ ಹೆಸರಿನಲ್ಲಿ, ಪ್ರದೀಪ್ ಈಶ್ವರ್ ಅವರು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಶಿವಕುಮಾರಸ್ವಾಮಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಅಪ್ಪ-ಮಗ, ಅಕ್ಕ-ಪಕ್ಕ..!: ‘ಜೆಡಿಎಸ್‍ನಿಂದ ಆಯ್ಕೆಯಾಗಿರುವ ಜಿ.ಟಿದೇವೇಗೌಡ ಹಾಗೂ ಇವರ ಪುತ್ರ ಹರೀಶ್ ಗೌಡ ಅಕ್ಕ-ಪಕ್ಕದಲ್ಲೇ ಕುಳಿತುಕೊಂಡು ಮಾತನಾಡುತ್ತಿದ್ದ ದೃಶ್ಯ ಕಂಡಿತು. ಚಾಮುಂಡೇಶ್ವರಿ ಕ್ಷೇತ್ರದಿಂದ ಜಿ.ಟಿ. ದೇವೇಗೌಡ ಹಾಗೂ ಹುಣಸೂರು ಕ್ಷೇತ್ರದಿಂದ ಹರೀಶ್ ಗೌಡ ಗೆಲುವು ಸಾಧಿಸಿ, ಈ ಬಾರಿ ವಿಧಾನಸಭೆ ಪ್ರವೇಶ ಮಾಡಿದ್ದಾರೆ.
.jpeg)
.jpeg)