ಮತದಾರರ ಖಾಸಗಿ ವಿಷಯ ಸಂಗ್ರಹಿಸಲು ಚಿಲುಮೆ ಸಂಸ್ಥೆಗೆ ಅವಕಾಶ; ತುಷಾರ್ ಗಿರಿನಾಥ್ ವಿರುದ್ಧ ತನಿಖೆಗೆ ಆಗ್ರಹ
ಸಿಎಂ ಸಿದ್ದರಾಮಯ್ಯಗೆ ಮಾಜಿ ಎಂಎಲ್ಸಿ ರಮೇಶ್ ಬಾಬು ಪತ್ರ
ಬೆಂಗಳೂರು, ಮೇ 22: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಚಿಲುಮೆ ಸಂಸ್ಥೆಯ ಮೂಲಕ ಎಸಗಿದ ಮತದಾರರ ಪಟ್ಟಿಯ ಲೋಪವನ್ನು ತನಿಖೆಗೆ ಒಳಪಡಿಸುವಂತೆ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ, ಮಾಜಿ ಎಂಎಲ್ಸಿ ರಮೇಶ್ಬಾಬು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ನೀಡಿದ್ದಾರೆ.
ಬಿಬಿಎಂಪಿ ಜಿಲ್ಲಾ ಚುನಾವಣಾ ಅಧಿಕಾರಿಯಾಗಿ ಆಯುಕ್ತ ತುಷಾರ್ ಗಿರಿನಾಥ್ ಚಿಲುಮೆ ಖಾಸಗಿ ಸಂಸ್ಥೆಗೆ ಮತದಾರರ ಖಾಸಗಿ ವಿಷಯ ಸಂಗ್ರಹಣೆಗೆ ಅವಕಾಶ ನೀಡಿ ಲೋಪವೆಸಗಿ, ಈ ಮೂಲಕ ಬಿಬಿಎಂಪಿ ವ್ಯಾಪ್ತಿಯ ಸುಮಾರು ನಾಲ್ಕರಿಂದ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಕಾರಣಕರ್ತರಾಗಿದ್ದಾರೆ. ಚಿಲುಮೆ ಸಂಸ್ಥೆಯ ಲೋಪದ ಸಂಬಂಧ ಚುನಾವಣಾ ಆಯೋಗ ತನಿಖೆಗೆ ಆದೇಶ ನೀಡಿ ವರದಿಯನ್ನು ಪಡೆದುಕೊಂಡಿದ್ದರೂ ಪೂರ್ಣ ಪ್ರಮಾಣದ ತನಿಖೆ ನಡೆದಿಲ್ಲ ಎಂದು ರಮೇಶ್ಬಾಬು ಆರೋಪಿಸಿದ್ದಾರೆ.
ಚುನಾವಣಾ ಅಧಿಕಾರಿಯಾಗಿ ಅವರ ಕರ್ತವ್ಯಲೋಪವನ್ನು ಬೇರೆ ಅಧಿಕಾರಿಗಳ ಮೇಲೆ ವರ್ಗಾಯಿಸಲೂ ಸಾಧ್ಯವಿಲ್ಲ. ಉನ್ನತ ಮಟ್ಟದ ತನಿಖೆಯ ಮೂಲಕ ತುಷಾರ್ ಗಿರಿನಾಥ್ ಅಕ್ರಮ ಬಯಲುಗೊಳಿಸುವುದರ ಜೊತೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂತಹ ಲೋಪಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಆದ್ದರಿಂದ ರಾಜ್ಯ ಸರಕಾರವು ಯಾವುದೇ ಪ್ರಭಾವಕ್ಕೆ ಒಳಗಾಗದೆ ಪೂರ್ಣ ಮಟ್ಟದ ತನಿಖೆ ನಡೆಸಬೇಕು ಎಂದು ರಮೇಶ್ಬಾಬು ಒತ್ತಾಯಿಸಿದ್ದಾರೆ.