ಮಂಗಳೂರು: ವಿಷಾಹಾರ ಸೇವನೆ; ಹಾಸ್ಟೆಲ್‌ನ 16 ವಿದ್ಯಾರ್ಥಿನಿಯರು ಅಸ್ವಸ್ಥ

ಮಂಗಳೂರು: ಹಾಸ್ಟೆಲ್‌ನಲ್ಲಿ ಆಹಾರದಲ್ಲಿ ಸಮಸ್ಯೆ ಉಂಟಾಗಿ ನಗರದ ಖಾಸಗಿ ನರ್ಸಿಂಗ್ ಕಾಲೇಜಿನ 16 ಮಂದಿ ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ.
ಕದ್ರಿ ಸಮೀಪದಲ್ಲಿರುವ ಹಾಸ್ಟೆಲ್‌ನಲ್ಲಿ 115 ಮಂದಿ ವಿದ್ಯಾರ್ಥಿನಿಯರಿದ್ದು ಅವರಲ್ಲಿ 16 ಮಂದಿಗೆ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ಹಾಸ್ಟೆಲಿನಲ್ಲಿ ನೀರಿನ ಸಮಸ್ಯೆಯಿಂದಾಗಿ ಆಹಾರದಲ್ಲಿ ತೊಂದರೆ ಆಗಿದೆ ಎನ್ನಲಾಗುತ್ತಿದ್ದು, ಎರಡು ತಿಂಗಳಲ್ಲಿ ಇದು ಎರಡನೇ ಬಾರಿಗೆ ಈ ರೀತಿ ಆಗಿದೆ ಎಂದು ವಿದ್ಯಾರ್ಥಿನಿಯರ ಹೆತ್ತವರು ದೂರಿದ್ದಾರೆ.
ರವಿವಾರ ರಾತ್ರಿ ಕೆಲವು ವಿದ್ಯಾರ್ಥಿನಿಯರಿಗೆ ವಾಂತಿ ಮತ್ತು ಭೇದಿ ಉಂಟಾಗಿದೆ. ಹೊಟ್ಟೆ ನೋವು ಸಮಸ್ಯೆ ಕಾಣಿಸಿಕೊಂಡಿದೆ ಎನ್ನಲಾಗಿದೆ.
ಆರೋಗ್ಯದ ಸಮಸ್ಯೆ ಕಾಣಿಸಿಕೊಂಡ ಕೂಡಲೇ ವಿದ್ಯಾರ್ಥಿನಿಯರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಅವರೆಲ್ಲ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಹಾಸ್ಟೆಲ್‌ಗೆ ಭೇಟಿ ನೀಡಿದ್ದಾರೆ. ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದ್ದಾರೆ.
ವಿದ್ಯಾರ್ಥಿನಿಯರು ಅಸ್ವಸ್ಥರಾಗಲು ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಹಾಸ್ಟೆಲ್‌ನಲ್ಲಿ ತಯಾರಿಸಲಾದ ಆಹಾರದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿದು ಬಂದಿದೆ.