ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಮಾಜಿ ಶಾಸಕ ಅಭಯ್ ಕುಮಾರ್ ವಿರುದ್ಧದ ದೂರು ಹೈಕೋರ್ಟ್ ನಿಂದ ರದ್ದು

ಬೆಂಗಳೂರು, ಮೇ 22: ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಬೆಳಗಾವಿ ಜಿಲ್ಲೆ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಅಭಯ್ ಕುಮಾರ್ ಪಾಟೀಲ್ ವಿರುದ್ಧ ದಾಖಲಾಗಿದ್ದ ಖಾಸಗಿ ದೂರನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.
ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿದ್ದ ಖಾಸಗಿ ದೂರನ್ನು ತನಿಖೆಗೆ ಶಿಫಾರಸು ಮಾಡಿದ್ದ ಬೆಳಗಾವಿ ಜಿಲ್ಲೆಯ ಸೆಷನ್ಸ್ ನ್ಯಾಯಾಲಯದ ಆದೇಶ ಮತ್ತು ಈ ಸಂಬಂಧ ಬೆಳಗಾವಿ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್‍ಐಆರ್ ರದ್ದುಪಡಿಸುವಂತೆ ಕೋರಿ ಅಭಯ್ ಕುಮಾರ್ ಪಾಟೀಲ್ ಅವರು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿದೆ.
ಅಲ್ಲದೆ, ಪ್ರಕರಣವನ್ನು ತನಿಖೆಗೆ ಶಿಫಾರಸು ಮಾಡಿದ ಸಂದರ್ಭದಲ್ಲಿ ಅರ್ಜಿದಾರರು ಶಾಸಕರಾಗಿರಲಿಲ್ಲ ಎಂಬುದಾಗಿ ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ. ಆದರೆ, 2012ರಲ್ಲೇ ಖಾಸಗಿ ದೂರು ದಾಖಲಾಗಿದೆ. ಆ ವೇಳೆ, ಅವರು ಶಾಸಕರಾಗಿದ್ದರು. ಆ ಪ್ರಕರಣವನ್ನು ತನಿಖೆಗೆ ಮೂರು ಬಾರಿಗೆ ಶಿಫಾರಸುಗೊಂಡಿತ್ತು. ಆ ವೇಳೆ ಅವರು ಶಾಸಕರು ಆಗಿರದೇ ಇರಬಹುದು. ಆದರೆ, ಪ್ರಿಯಾಂಕ ಶ್ರೀವಾತ್ಸವ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ, ಸಿಆರ್‍ಪಿಸಿ ಸೆಕ್ಷನ್ 154 ಪ್ರಕಾರ ಪೊಲೀಸರಿಗೆ ದೂರು ನೀಡದೇ, ನೇರವಾಗಿ ಖಾಸಗಿ ದೂರು ದಾಖಲಿಸಿದರೆ, ಆ ದೂರು ಪೊಲೀಸರಿಗೆ ಶಿಫಾರಸು ಮಾಡುವುದು ಊರ್ಜಿತವಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅಲ್ಲದೆ, ಅರ್ಜಿದಾರರ ವಿರುದ್ಧದ ಖಾಸಗಿ ದೂರು ಮತ್ತು ಎಸಿಬಿ ಪೊಲೀಸರು ಅಥವಾ ಲೋಕಾಯುಕ್ತ ಪೊಲೀಸರು 2017ರಲ್ಲಿ ದಾಖಲಿಸಿದ್ದ ಎಫ್‍ಐಆರ್ ರದ್ದುಪಡಿಸಿದೆ.
2004ರಿಂದ 2008ರ ಅವಧಿಯವರೆಗೆ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಅಭಯ್ ಕುಮಾರ್ ಪಾಟೀಲ್ ಅವರು ಆದಾಯ ಮೀರಿ ಅಕ್ರಮವಾಗಿ ಆಸ್ತಿ ಗಳಿಕೆ ಮಾಡಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಬೆಳಗಾವಿ 4ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರು.