ಬೆಂಗಳೂರು | ಕೆಳಸೇತುವೆಯಲ್ಲಿ ಯುವತಿ ಸಾವು ಪ್ರಕರಣ: ಕಾರು ಚಾಲಕ ಬಂಧನ

ಬೆಂಗಳೂರು, ಮೇ 22: ಮಳೆ ನೀರಿನಿಂದ ತುಂಬಿದ್ದ ಇಲ್ಲಿನ ಕೆಆರ್ ಸರ್ಕಲ್ ಕೆಳಸೇತುವೆಯಲ್ಲಿ ಕಾರು ಚಲಾಯಿಸಿ ಯುವತಿ ಪ್ರಾಣ ಕಳೆದುಕೊಂಡ ಪ್ರಕರಣ ಸಂಬಂಧ ಕಾರು ಚಾಲಕ ಹರೀಶ್ ಎಂಬಾತನನ್ನು ಹಲಸೂರು ಗೇಟ್ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಮೃತ ಯುವತಿಯ ಸಹೋದರ ನೀಡಿದ ದೂರಿನ ಅನ್ವಯ ನೀರು ನಿಂತಿದ್ದರೂ ಬೇಜವಾಬ್ದಾರಿತನದಿಂದ ಕೆಳಸೇತುವೆಯಲ್ಲಿ ಕಾರು ಚಲಾಯಿಸಿ ಅವಘಡಕ್ಕೆ ಕಾರಣನಾಗಿರುವ ಆರೋಪದಡಿ ಹರೀಶ್‍ನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಯಾಣಿಕರು ಬೇಡ ಎಂದು ಹೇಳಿದರೂ ಕೇಳದ ಚಾಲಕ ಹರೀಶ್, ನೀರು ತುಂಬಿದ್ದ ಕೆಳಸೇತುವೆಯಲ್ಲಿ ಕಾರು ಚಲಾಯಿಸಿದ್ದಾನೆ. ಈ ವೇಳೆ ಕಾರು ಬಂದ್ ಆಗಿದ್ದ ಹಿನ್ನೆಲೆ ಪ್ರಯಾಣಿಕರು ಕಾರಿನಿಂದ ಇಳಿಯಲು ಯತ್ನಿಸಿದಾಗ ಹರೀಶ್, ಬೇಡ ಎಂದಿದಲ್ಲದೆ, ಕಾರು ಚಾಲನೆ ಮಾಡಿ ಪುನಃ ಕರೆದೊಯ್ಯುವುದಾಗಿ ಹೇಳಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯವೂ ಉಲ್ಲೇಖ: ಬಿಬಿಎಂಪಿ ಬೇಜವಾಬ್ದಾರಿಗೆ ಕೆಳಸೇತುವೆಯಲ್ಲಿ ಮಳೆನೀರು ತುಂಬಿದೆ ಎಂದು ಹೇಳಲಾಗಿದ್ದು, ಈ ಬಗ್ಗೆಯೂ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.







