ಬೆಂಗಳೂರಿನಲ್ಲಿ ಮುಂದುವರಿದ ಮಳೆ: ಧರೆಗೆ ಉರುಳಿದ 400ಕ್ಕೂ ಅಧಿಕ ಮರಗಳು

ಬೆಂಗಳೂರು, ಮೇ 22: ಬೆಂಗಳೂರು ನಗರದಲ್ಲಿ ಎರಡು ದಿನಗಳಿಂದ ಮಳೆಯಾಗುತ್ತಿದ್ದು, 400ಕ್ಕೂ ಅಧಿಕ ಮರಗಳು ಧರೆಗೆ ಉರುಳಿವೆ. ಕಬ್ಬನ್ ಪಾರ್ಕ್ ಒಂದರಲ್ಲಿಯೇ 50ಕ್ಕೂ ಹೆಚ್ಚು ಮರಗಳು ಬಿದ್ದಿವೆ. ಇನ್ನು ನಗರದದ್ಯಾಂತ ಸುಮಾರು 1600ಕ್ಕೂ ಅಧಿಕ ರೆಂಬೆಗಳು ಮುರಿದು ರಸ್ತೆಗೆ ಬಿದ್ದಿವೆ. ಈ ಸಂಬಂಧ ಬಿಬಿಎಂಪಿಗೆ 600ಕ್ಕೂ ಅಧಿಕ ದೂರುಗಳು ಬಂದಿವೆ.
ನಾಗರಿಕರು ದೂರು ನೀಡಿರುವ ಹಿನ್ನೆಲೆ ಈಗಾಗಲೇ ಬಿಬಿಎಂಪಿ 200ಕ್ಕೂ ಹೆಚ್ಚು ಕಡೆ ಬಿಬಿಎಂಪಿ ಮರಗಳ ತೆರವು ಕಾರ್ಯಾಚರಣೆಗೆ ಇಳಿದಿದೆ. 50ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನು ಎರಡು ದಿನದ ಮಳೆಗೆ ತತ್ತರಿಸುತ್ತಿರುವ ತ್ಯಾಜ್ಯ ವಿಲೇವಾರಿಗೆ ಪೌರಕಾರ್ಮಿಕರು ಪರದಾಟ ನಡೆಸುತ್ತಿದ್ದು, ಹಲವು ಪ್ರಮುಖ ರಸ್ತೆಗಳು ತಿಪ್ಪೆ ಗುಂಡಿಯಾಗಿ ಮಾರ್ಪಟ್ಟಿವೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ ವ್ಯಾಪ್ತಿಯಲ್ಲಿ ಬರೋಬ್ಬರಿ 500ಕ್ಕೂ ಅಧಿಕ ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಅಪಾರ ನಷ್ಟವಾಗಿದೆ. ಮರಗಳು, ಮರದ ಕೊಂಬೆಗಳಂತೆ ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ, ನಗರದ ವ್ಯಾಪ್ತಿಯಲ್ಲೇ ಸುಮಾರು 140ಕ್ಕೂ ಹೆಚ್ಚು ಕಂಬಗಳು ಮುರಿದು ಬಿದ್ದಿವೆ. ಸುಮಾರು 20 ಟ್ರಾನ್ಸ್ ಫಾರ್ಮಾರ್‍ಗಳು ಸುಟ್ಟು ಕರಕಲಾಗಿವೆ ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ.
‘ಕಬ್ಬನ್ ಪಾರ್ಕ್‍ನಲ್ಲಿ 2ಸಾವಿರಕ್ಕೂ ಅಧಿಕ ಮರಗಳಿವೆ. 50ಕ್ಕೂ ಅಧಿಕ ಮರಗಳು ಎರಡು ದಿನಗಳಿಂದ ಸುರಿದ ಮಳೆಗೆ ಧರೆಗುರುಳಿವೆ. ಗಾಳಿಯ ತೀವ್ರತೆಗೆ ನೂರಾರು ವರ್ಷದ ಹಳೆಯ ಮರಗಳು ರೆಂಬೆ, ಕೊಂಬೆ ಸಹಿತ ಕಬ್ಬನ್ ಪಾರ್ಕ್‍ನಲ್ಲಿ ಮುರಿದು ಬೀಳುತ್ತಿವೆ. ಮುರಿದು ಬಿದ್ದಿರುವ ಮರಗಳನ್ನು ಸಿಬ್ಬಂದಿಗಳು ಕತ್ತರಿಸಿ ತೆರವು ಕಾರ್ಯ ಮಾಡುತ್ತಿದ್ದಾರೆ’
-ಎಚ್ ಟಿ ಬಾಲಕೃಷ್ಣ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ