MRPL ಆಡಳಿತೇತರ ಶ್ರೇಣಿಯ 50 ಹುದ್ದೆಗಳಿಗೆ ಅರ್ಜಿ ಆಹ್ವಾನ: ಸ್ಥಳೀಯರಿಗೆ ಅವಕಾಶ ನೀಡಲು ಆಗ್ರಹ

ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಭಾರತ ಸರಕಾರದ ಅಧೀನದಲ್ಲಿ ಇರುವ ಸಾರ್ವಜನಿಕ ರಂಗದ ಉದ್ಯಮ MRPL ಆಡಳಿತೇತರ ಶ್ರೇಣಿಯ 50 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿ ಪ್ರಕಟನೆ ಹೊರಡಿಸಿದೆ.
ಟಿಎಸ್5 ದರ್ಜೆಯ ಹುದ್ದೆಗಳಾದ ಕೆಮಿಕಲ್ 19, ಇಲೆಕ್ಟ್ರಿಕಲ್ 5 , ಮೆಕ್ಯಾನಿಕಲ್ 19, ಕೆಮಿಸ್ಟ್ರಿ 1, ಡ್ರಾಫ್ಟ್ಸ್‌ಮ್ಯಾನ್ 1 ಮತ್ತು ಜೆಎಂ 5 ದರ್ಜೆಯ ಸೆಕ್ರೆಟರಿ 5 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಪೋರ್ಟಲ್‌ನಲ್ಲಿ ಜೂ.16ರ ತನಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಸ್ಪೀಡ್ ಪೋಸ್ಟ್ ಮತ್ತು ಕೋರಿಯರ್ ಮೂಲಕ ಅರ್ಜಿ ತಲುಪಲು ಕೊನೆಯ ದಿನಾಂಕ ಜೂ. 20 ಆಗಿದೆ.
ಸರಿಯಾಗಿ ಎರಡು ವರ್ಷಗಳ ಹಿಂದೆ, ಇದೇ ಶ್ರೇಣಿಯ 234 ಹುದ್ದೆಗಳಿಗೆ ನೇಮಕಾತಿ ಅಂತಿಮಗೊಂಡಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಎರಡು, ಕರ್ನಾಟಕ ರಾಜ್ಯದ ಎಂಟು ಜನರು ಮಾತ್ರ ನೇಮಕಗೊಂಡಿದ್ದರು. ಉಳಿದವು ಉತ್ತರ ಭಾರತದವರ ಪಾಲಾಗಿತ್ತು. ಆ ನೇಮಕಾತಿಯ ಸಂದರ್ಭದಲ್ಲೂ ಡಿವೈಎಫ್‌ಐ ಸ್ಥಳೀಯರಿಗೆ ಆದ್ಯತೆ ಒದಗಿಸುವಂತೆ ಹೋರಾಟ ನಡೆಸಿತ್ತು. ಕನ್ನಡ ಕಾವಲು ಸಮಿತಿಯ ಅಧ್ಯಕ್ಷರೂ ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸುಗಳನ್ನು ಅಳವಡಿಸಿ ನೇಮಕಾತಿ ನಡೆಸುವಂತೆ ನೋಟಿಸ್ ನೀಡಿತ್ತು.
MRPL ಈ ಒತ್ತಾಯ, ನೋಟೀಸುಗಳಿಗೆ ಮಾನ್ಯತೆ ನೀಡದೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿತ್ತು. ಸ್ಥಳೀಯರನ್ನು ಪೂರ್ತಿ ಹೊರಗೆ ಇಟ್ಟದ್ದು ಬಹಿರಂಗಗೊಂಡಾಗ ಸ್ಥಳೀಯವಾಗಿ ದೊಡ್ಡ ಮಟ್ಟದ ಆಕ್ರೋಶ ಸ್ಪೋಟಗೊಂಡಿತ್ತು. ಕೊರೋನ ಲಾಕ್ ಡೌನ್ ಜಾರಿಯಲ್ಲಿದ್ದ ಕಾರಣ ಬೀದಿಗಿಳಿಯಲು ಅವಕಾಶ ಇಲ್ಲದಿದ್ದರೂ ಸಾಮಾಜಿಕ ಜಾಲತಾಣ ಹೋರಾಟದ ವೇದಿಕೆಯಾಗಿತ್ತು. ಡಿವೈಎಫ್‌ಐ ಮನೆ ಮನೆ ಪ್ರತಿಭಟನೆಗೆ ಕರೆ ನೀಡಿದಾಗ 25 ಸಾವಿರಕ್ಕೂ ಹೆಚ್ಚು ಜನ ಸ್ವಯಂ ಪ್ರೇರಣೆಯಲ್ಲಿ ಈ ಹೋರಾಟದಲ್ಲಿ ಭಾಗಿಯಾಗಿದ್ದರು.
ಪ್ರತಿಭಟನೆಯ ಬಿಸಿ ತಟ್ಟುತ್ತಿದ್ದಂತೆ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರುಗಳಾದ ಉಮಾನಾಥ ಕೋಟ್ಯಾನ್, ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಕಂಪೆನಿಯ ಆಡಳಿತದ ಪ್ರಮುಖರೊಂದಿಗೆ ಮಾತುಕತೆ ನಡೆಸಿದ್ದರು. 234 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ರದ್ದುಗೊಂಡಿದೆ, ಸ್ಥಳೀಯ ಯುವಜನರಿಗೆ ಆದ್ಯತೆ ನೀಡಿ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಘೋಷಿಸಿದ್ದರು. ಆದರೆ, ಆ ಘೋಷಣೆ ಸುಳ್ಳಾಗಿದೆ. ಅದೇ ಉತ್ತರ ಭಾರತದ 234 ಮಂದಿ ಎಂಆರ್‌ಪಿಎಲ್‌ನಲ್ಲಿ ಉದ್ಯೋಗಿಗಳಾಗಿ ಸೇರ್ಪಡೆಗೊಂಡಿದ್ದರು.
ಈಗ ಮತ್ತೆ 50 ಹುದ್ದೆಗಳ ನೇಮಕಾತಿ: ನಮ್ಮ ನದಿ, ಕಡಲು, ವಾಯು, ಅಂತರ್ಜಲವನ್ನು ವಿಷಮಯಗೊಳಿಸಿದ ಕಂಪೆನಿಯಲ್ಲಿ ನಮ್ಮ ತುಳುನಾಡ ವಿದ್ಯಾವಂತ ಮಕ್ಕಳಿಗೆ ಪ್ರವೇಶ ಇಲ್ಲ. ನೇಮಕಾತಿಯಲ್ಲಿ ಆದ್ಯತೆ ಇಲ್ಲ. ಇದೇ ಕಂಪೆನಿಯ ದೇಶದ ಉಳಿದೆಡೆಯ ಘಟಕಗಳಲ್ಲಿ ಆ ರಾಜ್ಯದ ಸ್ಥಳೀಯರಿಗೆ ಮೀಸಲಾತಿ ಇದೆ. ಕರ್ನಾಟಕದ ಮಂಗಳೂರಿನಲ್ಲಿ ಮಾತ್ರ ಇಲ್ಲ. ಯಾಕೆ ? ಅಂತ ಕೇಳಲು ಸ್ಥಳೀಯ ಸಂಸದ, ಶಾಸಕರುಗಳಿಗೆ ಆಸಕ್ತಿ ಇಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಕೇಂದ್ರ ಸರಕಾರದ ಅಧೀನದಲ್ಲಿ ಇರುವ ಎಂಆರ್‌ಪಿಎಲ್‌ನಲ್ಲಿ ಈಗ ನಡೆಯುತ್ತಿರುವ ಈ ಅನ್ಯಾಯದ ನೇಮಕಾತಿ ಪ್ರಕ್ರಿಯೆಗೆ ಆರಂಭದಲ್ಲೇ ಬ್ರೇಕ್ ಹಾಕಿ. ಸ್ಥಳೀಯರಿಗೆ ಆದ್ಯತೆ ಒದಗಿಸಿ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ತಾಕೀತು ಮಾಡಿ, 50 ಹುದ್ದೆಗಳಲ್ಲಿ ಕನಿಷ್ಠ 40 ಹುದ್ದೆಗಳಾದರೂ ಸ್ಥಳೀಯರಿಗೆ ಮೀಸಲಿಡಬೇಕು ಎಂದು ಆಗ್ರಹಿಸಿರುವ ಡಿವೈಎಫ್‌ಐ ಮತ್ತೆ ಹೋರಾಟ ಮುಂದುವರಿಸಲಿದೆ ಎಂದು ತಿಳಿಸಿದೆ.