ಉಡುಪಿ ಸರಕಾರಿ ಆಸ್ಪತ್ರೆಗಳಿಗೂ ತಟ್ಟಿದ ನೀರಿನ ಕೊರತೆಯ ಬಿಸಿ!
► ಟ್ಯಾಂಕರ್ ನೀರು ಪೂರೈಕೆಯಲ್ಲಿ ವಿಳಂಬ ►ನೀರಿಲ್ಲದೆ ರೋಗಿಗಳ ಪರದಾಟ

ಉಡುಪಿ, ಮೇ 22: ಜಿಲ್ಲೆಯಾದ್ಯಂತ ಕುಡಿಯುವ ನೀರಿಗಾಗಿ ಹಾಹಕಾರ ಎದ್ದಿದೆ. ಎಲ್ಲಡೆ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಇದರ ಪರಿಣಾಮ ಇದೀಗ ಅಜ್ಜರಕಾಡಿನಲ್ಲಿರುವ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆ ಹಾಗೂ ನಗರದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳು ಎದುರಿಸುತ್ತಿವೆ. ಕಳೆದ ಕೆಲವು ದಿನಗಳಿಂದ ನೀರಿನ ಸಮರ್ಪಕ ಪೂರೈಕೆಗೆ ಇಲ್ಲದೆ ರೋಗಿಗಳು ಸಂಕಷ್ಟ ಪಡುವಂತಾಗಿದೆ.
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಪ್ರತಿದಿನ ಸರಾಸರಿ 900-1000 ಹೊರರೋಗಿ ಗಳು ಹಾಗೂ 100-130 ಮಂದಿ ಒಳರೋಗಿಗಳು ಇರುತ್ತಾರೆ. 55 ಖಾಯಂ ನೌಕರರು ಮತ್ತು 60-70 ಹೊರಗುತ್ತಿಗೆ ನೌಕಕರಿದ್ದಾರೆ. ಇಲ್ಲಿ ಪ್ರತಿದಿನ ರೋಗಿಗಳ ಸ್ನಾನ, ಶೌಚಾಲಯ, ಅಡುಗೆ, ಬಟ್ಟೆ ಹೊಗೆಯಲು ನೀರನ್ನು ಬಳಕೆ ಮಾಡ ಲಾಗುತ್ತಿದೆ. ಇಲ್ಲಿಗೆ ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸರಕಾರಿ ಜಾಗದಲ್ಲಿರುವ ಬಾವಿಯಿಂದ ಪೈಪ್‌ಲೈನ್ ಮೂಲಕ ನೀರು ಪೂರೈಕೆ ಮಾಡ ಲಾಗುತ್ತದೆ.
ಅದೇ ರೀತಿ ನಗರದಲ್ಲಿರುವ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ನೀರು ಪೂರೈಸಲು ನೀರಿನ ಮೂಲಗಳೇ ಇಲ್ಲ. ಈ ಆಸ್ಪತ್ರೆಯು ಸಂಪೂರ್ಣವಾಗಿ ನಗರಸಭೆಯ ನೀರನ್ನು ಅವಲಂಬಿಸಿಕೊಂಡಿದೆ. ಇಲ್ಲಿಗೂ ಕೂಡ ಪ್ರತಿದಿನ ನೂರಾರು ಗರ್ಭಿಣಿಯರು ಹಾಗೂ ರೋಗಿಗಳು ಭೇಟಿ ನೀಡುತ್ತಾರೆ ಮತ್ತು ಹೆರಿಗೆಗಾಗಿ ಆಸ್ಪತ್ರೆ ದಾಖಲಾಗುತ್ತಾರೆ.
ಜನವರಿಯಿಂದಲೇ ಸಮಸ್ಯೆ: ಈ ಬಾರಿ ಜಿಲ್ಲೆಯಲ್ಲಿನ ಮಳೆಯ ಅಭಾವದ ಪರಿಣಾಮ ಅಜ್ಜರಕಾಡು ಆಸ್ಪತ್ರೆಗೆ ನೀರು ಪೂರೈಸುವ ಬಾವಿಯಲ್ಲಿನ ನೀರು ಸಂಪೂರ್ಣ ಬತ್ತಿ ಹೋಗಿದೆ. ಜನವರಿಯಿಂದಲೇ ಆಸ್ಪತ್ರೆಗಳು ನೀರಿನ ಸಮಸ್ಯೆ ಎದುರಿಸಲು ಆರಂಭಿಸಿವೆ.
ಹೀಗೆ ಸಮರ್ಪಕ ನೀರು ಪೂರೈಕೆಯಾಗದೆ ಆಸ್ಪತ್ರೆಯ ರೋಗಿಗಳು ಹಾಗೂ ಸಿಬ್ಬಂದಿಗಳು ತೊಂದರೆ ಅನುಭವಿಸುವಂತಾಗಿದೆ. ಇತ್ತ ನಗರಸಭೆಯಿಂದ ಮೂರು ದಿನಗಳಿಗೊಮ್ಮೆ ನೀರು ಪೂರೈಕೆ ಆಗುತ್ತಿದ್ದು, ಈ ನೀರು ಆಸ್ಪತ್ರೆಯ ದಿನಬಳಕೆಗೆ ಸಾಕಾಗುತ್ತಿಲ್ಲ. ಸಂಪೂರ್ಣವಾಗಿ ನಗರಸಭೆಯ ನೀರನ್ನೇ ಅವಲಂಬಿಸಿಕೊಂಡಿ ರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೂ ಕೂಡ ನೀರಿನ ಕೊರತೆಯ ಬಿಸಿ ತಟ್ಟಿದೆ.
2018ರಲ್ಲಿ ಇದೇ ರೀತಿ ಜಿಲ್ಲೆಯಲ್ಲಿ ಮಳೆ ಅಭಾವ ತಲೆದೋರಿದಾಗ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಕಾಡಿತ್ತು. ಅದರ ನಂತರ ಬಾವಿ ಮತ್ತು ನಗರಸಭೆ ನೀರನ್ನು ಬಳಕೆ ಮಾಡಲಾಗುತ್ತಿತ್ತು. ನೀರಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಇದೀಗ ಐದು ವರ್ಷಗಳ ನಂತರ ಮತ್ತೆ ಅದೇ ರೀತಿಯ ಪರಿಸ್ಥಿತಿ ಎದುರಾಗಿದೆ ಎಂದು ಪ್ರಭಾರ ಜಿಲ್ಲಾ ಸರ್ಜನ್ ಡಾ.ಸುದೇಶ್ ಕುಮಾರ್ ತಿಳಿಸಿದ್ದಾರೆ.
ಟ್ಯಾಂಕರ್ ನೀರು ಪೂರೈಕೆ: ನೀರಿನ ಸಮಸ್ಯೆಯ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆ ಯಿಂದ ಟ್ಯಾಂಕರ್ ನೀರಿಗಾಗಿ ಇ ಟೆಂಡರ್ ಕರೆಯಲಾಗಿತ್ತು. ಅದರಂತೆ ಪ್ರತಿ ಟ್ಯಾಂಕರ್‌ಗೆ 1300ರೂ.ನಂತೆ ಮೊತ್ತವನ್ನು ನಿಗದಿಪಡಿಸಲಾಗಿತ್ತು.
ಅದರಂತೆ ಜನವರಿ ತಿಂಗಳಿನಿಂದಲೇ ಟ್ಯಾಂಕರ್ ನೀರು ಜಿಲ್ಲಾಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಸರಬರಾಜು ಮಾಡಲಾಗುತ್ತಿತ್ತು. ಇದೀಗ ಬಾವಿ ಮತ್ತು ನಗರಸಭೆ ನೀರಿನ ಕೊರತೆಯಿಂದ ಟ್ಯಾಂಕರ್ ನೀರಿನ ಅವಶ್ಯಕತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಪ್ರತಿದಿನ ಎರಡು ಆಸ್ಪತ್ರೆಗಳಿಗೆ ತಲಾ ನಾಲ್ಕರಂತೆ ಒಟ್ಟು ಎಂಟು ಟ್ಯಾಂಕರ್ ನೀರನ್ನು ಸರಬರಾಜು ಮಾಡಲಾಗುತ್ತಿದೆ.
ನಗರದಲ್ಲಿ ನೀರಿನ ಮೂಲಗಳೇ ಬತ್ತಿ ಹೋಗುತ್ತಿರುವುದರಿಂದ ಟ್ಯಾಂಕರ್ ನವರಿಗೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕೆಲವೊಂದು ಬಾರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದೆ. ಹೀಗಾಗಿ ಆಸ್ಪತ್ರೆಯ ರೋಗಿಗಳಿಗೆ ನೀರಿಲ್ಲದೆ ಸಂಕಷ್ಟ ಪಡುವಂತಾಗಿದೆ. ಕೆಲವೊಂದು ಬಾರಿ ಆಸ್ಪತ್ರೆಯ ಶೌಚಾಲಯಕ್ಕೂ ಬೀಗ ಜಡಿಯಲಾಗುತ್ತಿದೆ ಎಂಬುದು ರೋಗಿಗಳ ಆರೋಪ.
ಆಸ್ಪತ್ರೆಗೆ ಉಡುಪಿ ಜಿಲ್ಲಾಧಿಕಾರಿ ಭೇಟಿ
ಉಡುಪಿಯ ಅಜ್ಜರಕಾಡು ಸರಕಾರಿ ಜಿಲ್ಲಾ ಆಸ್ಪತ್ರೆ ಯಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು ಇಲ್ಲಿನ ಸಮಸ್ಯೆ ಪರಿಹಾರಕ್ಕೆ ವೈದ್ಯಾಧಿಕಾರಿಗಳು ಅಸಹಾಯಕರಾಗಿದ್ದಾರೆ. ನೀರಿಲ್ಲದೆ ಗಂಡಸರ ಶೌಚಾಲಯಕ್ಕೆ ಬೀಗ ಜಡಿದ್ದಿದ್ದಾರೆ. ಇಲ್ಲಿನ ರೋಗಿಗಳ ಪರದಾಟ ಕೇಳುವವರಿಲ್ಲ. ಒಂದು ಆಸ್ಪತ್ರೆಯ ಸ್ಥಿತಿ ಈ ಮಟ್ಟಕ್ಕೆ ಬಂದಿರುವುದು ಇದೇ ಮೊದಲು. ಆದರಿಂದ ತಾವು ತಕ್ಷಣವೇ ಈ ಬಗ್ಗೆ ಗಮನ ಹರಿಸಿ ನೀರಿನ ಸಮಸ್ಯೆಗೆ ಸ್ಪಂದಿಸಬೇಕೆಂದು ಹೋರಾಟಗಾರ ಜಯನ್ ಮಲ್ಪೆ ಉಡುಪಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ಗೆ ಸಲ್ಲಿಸಿರುವ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಉಡುಪಿ ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೋಗಿಗಳ ಸಮಸ್ಯೆ ಗಳನ್ನು ಕೇಳಿ, ನೀರಿನ ಕೊರತೆ ನಿಗೀಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಸರ್ಜನ್ ಡಾ.ಸುದೇಶ್ ಕುಮಾರ್ ಅವರಿಗೆ ಸೂಚನೆ ನೀಡಿದರು.
ನೀರಿಗಾಗಿ ದಾನಿಗಳ ನಿರೀಕ್ಷೆ!
ಜಿಲ್ಲಾಸ್ಪತ್ರೆಯು ಸಾಕಷ್ಟು ನೀರಿನ ಸಮಸ್ಯೆ ಎದುರಿಸುತ್ತಿರುವುದರಿಂದ ಮತ್ತು ಟ್ಯಾಂಕರ್‌ಗಳಿಗೆ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಅಧಿಕಾರಿಗಳು ನೀರು ಸರಬರಾಜು ಮಾಡುವ ದಾನಿಗಳ ನಿರೀಕ್ಷೆಯಲ್ಲಿದ್ದಾರೆ.
ಆಸ್ಪತ್ರೆಯಲ್ಲಿ ಸಾಕಷ್ಟು ಬಡ ರೋಗಿಗಳು ಇರುವುದರಿಂದ ಅವರಿಗೆ ಅವಶ್ಯಕ ವಾಗಿರುವ ನೀರನ್ನು ದಾನಿಗಳು ತಮ್ಮ ನೀರಿನ ಮೂಲಗಳಿಂದ ಸಂಗ್ರಹಿಸಿ ಟ್ಯಾಂಕರ್ ಮೂಲಕ ಆಸ್ಪತ್ರೆಗೆ ಪೂರೈಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
‘ಜಿಲ್ಲಾಸ್ಪತ್ರೆಗೆ ಪಂಪ್ ಮಾಡಲಾಗುತ್ತಿದ್ದ ಬಾವಿಯಲ್ಲಿ ನೀರು ಬತ್ತಿ ಹೋಗಿ ರುವುದರಿಂದ ಟ್ಯಾಂಕರ್ ನೀರಿನ ಮೊರೆ ಹೋಗಿದ್ದೇವೆ. ಈಗಾಗಲೇ ಟೆಂಡರ್ ಕರೆದು ಎರಡು ಆಸ್ಪತ್ರೆಗಳಿಗೆ ಪ್ರತಿದಿನ ಎಂಟು ಟ್ಯಾಂಕರ್ ನೀರು ಹಾಕಲಾಗುತ್ತಿದೆ. ಕೆಲವೊಮ್ಮೆ ರೋಗಿಗಳ ಸಂಖ್ಯೆ ಹೆಚ್ಚಾದಾಗ ನೀರಿನ ಸಮಸ್ಯೆ ಎದುರಿಸ ಬೇಕಾಗುತ್ತಿದೆ. ಆದರೂ ಯಾವುದೇ ಸಮಸ್ಯೆ ಆಗದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ನಿರ್ದೇಶನ ನೀಡಿದ್ದಾರೆ. ಅದರಂತೆ ನಗರಸಭೆಯಿಂದ ಒಂದು ಟ್ಯಾಂಕರ್ ನೀರು ಇವತ್ತು ಸರಬರಾಜು ಮಾಡಲಾಗಿದೆ. ಟೆಂಡರ್ ಟ್ಯಾಂಕರ್‌ನವರಿಗೆ ಅಗತ್ಯ ಬಿದ್ದಲ್ಲಿ ಹೆಚ್ಚುವರಿ ಟ್ಯಾಂಕರ್ ನೀರು ಕಳುಹಿಸುವಂತೆ ಸೂಚಿಸಿದ್ದೇವೆ’
-ಡಾ.ಸುದೇಶ್ ಕುಮಾರ್, ಪ್ರಭಾರ ಜಿಲ್ಲಾ ಸರ್ಜನ್, ಉಡುಪಿ
