20 ಕೆಳಸೇತುವೆಗಳ ಸ್ಥಿತಿಗತಿಗಳ ಸರ್ವೇಗೆ ಮುಂದಾದ ಬಿಬಿಎಂಪಿ

ಬೆಂಗಳೂರು, ಮೇ 22: ನಗರದಲ್ಲಿ ಮಳೆ ಸುರಿದು ಅಹಿತಕರ ಘಟನೆಗಳು ನಡೆದ ಹಿನ್ನೆಲೆಯಲ್ಲಿ ನಗರದ ಪ್ರಮುಖ 20 ಅಂಡರ್ ಪಾಸ್‍ಗಳ ಸ್ಥಿತಿಗತಿಗಳ ಬಗ್ಗೆ ಸರ್ವೇ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಸೋಮವಾರ ಬಿಬಿಎಂಪಿ ಕೇಂದ್ರ ಕಚೇರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಯಿಂದ ಕೆಆರ್ ಸರ್ಕಲ್‍ನ ಕೆಳ ಸೇತುವೆಯಲ್ಲಿ ಯುವತಿ ಮರಣ ಹೊಂದಿದ್ದಾರೆ. ಇಂತಹ ಅಹಿತಕರ ಘಟನೆಗಳನ್ನು ತಡೆಯುವ ಉದ್ದೇಶದಿಂದ ನಗರದಲ್ಲಿರುವ ಎಲ್ಲ ಮಾದರಿಯ ಕೆಳಸೇತುವೆಗಳ ಆಡಿಟ್ ಮಾಡಲು ಮುಖ್ಯ ಅಭಿಯಂತರರಿಗೆ ಸೂಚನೆ ನೀಡಲಾಗಿದೆ. ಯಾವ ಕೆಳಸೇತುವೆಯಲ್ಲಿ ನೀರು ಸುಗಮವಾಗಿ ಹೋಗುವುದಿಲ್ಲವೂ, ಅವುಗಳನ್ನು ತಾತ್ಕಲಿಕವಾಗಿ ಬಂದ್ ಮಾಡಲಾಗಿದೆ ಎಂದರು.
ನಗರದಲ್ಲಿ ರವಿವಾರದಂದು ಸುರಿದ ಮಳೆಗೆ ಮಹಾಲಕ್ಷ್ಮೀ ಲೇಔಟ್ ಸೇರಿ ನಗರದದ್ಯಾಂತ ಸುಮಾರು 25 ಮನೆಗಳಿಗೆ ನೀರು ನುಗ್ಗಿದೆ. ಮಹಾಲಕ್ಷ್ಮೀ ಲೇಔಟ್‍ನಲ್ಲಿ ಕಾಮಗಾರಿ ನಡೆಯುತ್ತಿರುವ ಕಾರಣ ಮನೆಗಳಿಗೆ ನೀರು ನುಗ್ಗಿದೆ ಎಂದು ಅವರು ಮಾಹಿತಿ ನೀಡಿದರು.
45 ನಿಮಿಷದ ಅವಧಿಯಲ್ಲೇ 50 ಮಿಮಿ ಮೀಟರ್ ಮಳೆ ಬಂದಿದೆ. ಮಳೆ ನೀರಿಗಿಂತ ಸುತ್ತಮುತ್ತಲಿನ ಪ್ರದೇಶದಿಂದ ಬರುವಂತಹ ನೀರು ಹೆಚ್ಚಿದ್ದು, ಇದರಿಂದ ಕೆಳಸೇತುವೆಗಳಲ್ಲಿ ನೀರು ತುಂಬುವ ಪರಿಸ್ಥಿತಿ ಎದುರಾಗಿದೆ. ಪೊಲೀಸ್ ಇಲಾಖೆಯಿಂದ ನೀಡಿದ್ದ ಸೂಕ್ಮ ಹಾಗೂ ಅತೀ ಸೂಕ್ಮ ಪ್ರದೇಶಗಳಲ್ಲಿ ದುರಸ್ತಿ ಕಾರ್ಯ ಮಾಡಲಾಗಿದೆ ಎಂದು ಅವರು ಹೇಳಿದರು.
ನಗರದಲ್ಲಿ ಒಟ್ಟು 115 ಕಡೆ ದುರಸ್ತಿ ಕಾರ್ಯ ನಡೆದಿದ್ದು, ಅಲ್ಲಿ ಯಾವುದೆ ಸಮಸ್ಯೆ ಇಲ್ಲ. ಉಳಿದ 25 ಕಡೆ ಸೂಕ್ಷ್ಮ ಪ್ರದೇಶಗಳನ್ನು ಸ್ವಚ್ಛ ಮಾಡಬೇಕಿದೆ. ನಾವು ನಿರಂತರವಾಗಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೀವೆ. ರಾಜಕಾಲುವೆ ಕೆಲಸಗಳನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದೇವೆ. ನಿರಂತರವಾಗಿ ಕೆಲಸ ನಡೆಸಿದ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದ ಮಳೆ ಆದರೂ, ಹೆಚ್ಚು ಕಡೆ ಅವಘಡಗಳು ನಡೆದಿಲ್ಲ ಎಂದು ಅವರು ತಿಳಿಸಿದರು.