ಗುಡುಗು-ಸಿಡಿಲಿನ ಪರಿಣಾಮ ತಗ್ಗಿಸಲು ಸೂಚನೆಗಳನ್ನು ಪ್ರಕಟಿಸಿದ ಸರಕಾರ

ಬೆಂಗಳೂರು, ಮೇ 22: ಗುಡುಗು ಮತ್ತು ಸಿಡಿಲು ಬಡಿತ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸಲಹೆ ಸೂಚನೆಗಳನ್ನು ನೀಡಿದ್ದು, ಅವನ್ನು ಪಾಲಿಸುವಂತೆ ರಾಜ್ಯ ಸರಕಾರವು ಸುತ್ತೋಲೆಯನ್ನು ಹೊರಡಿಸಿದೆ.
ಸಿಡಿಲಿಗೆ ಸಾಮಾನ್ಯವಾಗಿ ತುತ್ತಾಗುವ ಸ್ಥಳಗಳನ್ನು ಗುರುತಿಸಿ ಸಾರ್ವಜನಿಕ ಆಸ್ತಿ ಅಥವಾ ಮೂಲ ಸೌಕರ್ಯಗಳ ರಕ್ಷಣೆಗೆ ಕ್ರಮ ವಹಿಸಬೇಕು. ಸ್ಥಳೀಯ ಜನರನ್ನು ಎಚ್ಚರಿಸಲು ಹಾಗೂ ಗುಡುಗು ಮತ್ತು ಸಿಡಿಲಿನ ಅಪಾಯಗಳನ್ನು ತಗ್ಗಿಸಲು ಸಲಹೆ ಸೂಚನೆಗಳನ್ನು ನೀಡಲು ಶಾಲೆ, ಕಾಲೇಜು, ರೈತ ಸಂಪರ್ಕ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ವೈದ್ಯಕೀಯ ಚಿಕಿತ್ಸಾ ಕೇಂದ್ರಗಳು ಹಾಗೂ ಸಮುದಾಯ ಕೇಂದ್ರಗಳಲ್ಲಿ ವ್ಯಾಪಕ ತಿಳುವಳಿಕೆ ಹಾಗೂ ಮಾಹಿತಿಯನ್ನು ನೀಡಬೇಕು ಎಂದು ಸೂಚಿಸಿದೆ.
ಗುಡುಗು ಮತ್ತು ಸಿಡಿಲಿನ ಸಂದರ್ಭದಲ್ಲಿ ವಿದ್ಯುತ್ ಉಪಕರಣ ಹಾಗೂ ವಿದ್ಯುತ್ ಸರಬರಾಜು ಮಾರ್ಗ, ದೂರವಾಣಿ ಸಂಪರ್ಕ, ಮೊಬೈಲ್ ಟವರ್, ಪವನ ವಿದ್ಯುತ್ ಗೋಪುರ ಹಾಗೂ ರೈಲು ಹಳಿಗಳಿಂದ ದೂರವಿರಬೇಕು. ವಾಹನ ಚಾಲನೆಯಲ್ಲಿದ್ದರೆ, ತಕ್ಷಣವೇ ವಾಹನ ನಿಲ್ಲಸಿ ವಾಹನದಲ್ಲೇ ಆಶ್ರಯ ಪಡೆಯಬೇಕು ಎಂದು ತಿಳಿಸಿದೆ.
ಮಿಂಚನ್ನು ಆಕರ್ಷಿಸುವ ವಿದ್ಯುತ್ ಅಥವಾ ಟೆಲಿಫೋನ್ ಕಂಬಗಳು ಅಥವಾ ಮರಗಳ ಕೆಳಗೆ ಆಶ್ರಯವನ್ನು ಪಡೆಯಬಾರದು. ಸಿಡಿಲು ಸಂದರ್ಭದಲ್ಲಿ ಮೊಬೈಲ್ ಫೋನ್‍ಗಳನ್ನು ಬಳಸಬಾರದು. ಕಬ್ಬಿಣದ ಸರಳುಗಳಿಂದ ಕೂಡಿದ ಛತ್ರಿಗಳನ್ನು ಬಳಸಬಾರದು ಎಂದು ಎಚ್ಚರಿಕೆ ನೀಡಲಾಗಿದೆ.







