ಫ್ಲೂ, ಕೋವಿಡ್ ಸೋಂಕು ಪರೀಕ್ಷೆಗೆ ಒಂದೇ ಕಿಟ್ ಅಭಿವೃದ್ಧಿಪಡಿಸಿದ ಭಾರತ

ಹೊಸದಿಲ್ಲಿ: ಇನ್ಫ್ಲುಯೆನ್ಸ ಎ, ಬಿ ಮತ್ತು ಸಾರ್ಸ್ ಕೋವ್-2 ಸೋಂಕುಗಳನ್ನು ಪತ್ತೆ ಮಾಡುವ ಒಂದೇ ಕಿಟ್ ಅನ್ನು ದೇಶದಲ್ಲಿ ಮೊಟ್ಟನೊದಲ ಬಾರಿಗೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಅಭಿವೃದ್ಧಿಪಡಿಸಿದೆ. ಆಸಕ್ತ ಕಂಪನಿಗಳು ಇವುಗಳನ್ನು ಸಮೂಹ ಮಾರುಕಟ್ಟೆಗೆ ಒಯ್ಯಬಹುದು ಎಂದು ಸಂಸ್ಥೆ ಸಲಹೆ ಮಾಡಿದೆ.
ಮಲ್ಟಿಪ್ಲೆಕ್ಸ್ ಸಿಂಗಲ್ ಟ್ಯೂಬ್ ರಿಯಲ್ ಟೈಮ್ ಆರ್ಟಿ-ಪಿಸಿಆರ್ ಎಂಬ ಈ ಕಿಟ್ ಇನ್ಫ್ಲೂಯೆನ್ಝಾ ಎ, ಬಿ ಮತ್ತು ಕೋವಿಡ್-19 ಸೋಂಕನ್ನು ಪತ್ತೆ ಮಾಡಬಲ್ಲದ ಎಂದು ಎನ್ಐವಿಯ ಪುಣೆ ಇನ್ಫ್ಲೂಯೆನ್ಝಾ ವಿಭಾಗದ ಮುಖ್ಯಸ್ಥರಾದ ಡಾ.ವರ್ಷಾ ಪೋದ್ದಾರ್ ಹೇಳಿದ್ದಾರೆ.
"ಇದು ಒಂದೇ ಪರೀಕ್ಷೆಯಲ್ಲಿ ಮೂರು ಸೋಂಕುಗಳನ್ನು ಪತ್ತೆ ಮಾಡಬಹುದಾದ ಸುಲಭ, ಸಮಯ ಉಳಿತಾಯದ ಮತ್ತು ಸಮರ್ಥ ವಿಧಾನವಾಗಿದೆ. ಏಕ ಕೊಳವೆ ಸಹಜವಾಗಿಯೇ ವ್ಯಕ್ತಿಯ ಒಂದೇ ಮಾದರಿಯನ್ನು ಮೂರು ಸೋಂಕುಗಳ ಪತ್ತೆಗೆ ಬಳಸಿಕೊಳ್ಳುತ್ತದೆ. ಪ್ರಯೋಗಾಲಯ ತಂತ್ರಜ್ಞರು ಮಾದರಿಗಳನ್ನು ಪ್ರತ್ಯೇಕವಾಗಿ ಪರೀಕ್ಷಿಸುವ ಅಗತ್ಯವಿಲ್ಲ" ಎಂದು ಸ್ಪಷ್ಟಪಡಿಸಿದರು.
ಮೂರೂ ಸೋಂಕುಗಳ ರೋಗಲಕ್ಷಣಗಳು ಒಂದೇ ಆಗಿದ್ದು, ಫ್ಲೂ ಹೆಚ್ಚುವ ಸೀಸಸ್ನಲ್ಲಿ ರೋಗಪತ್ತೆಗೆ ಇದು ಅತ್ಯುಪಯುಕ್ತವಾಗಲಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಅಂಗಸಂಸ್ಥೆಯಾಗಿರುವ ಎನ್ಐವಿ, ದೊಡ್ಡ ಪ್ರಮಾಣದಲ್ಲಿ ಈ ಕಿಟ್ಗಳನ್ನು ಉತ್ಪಾದಿಸಿ ಮಾರಾಟ ಮಡಲು ಕಂಪನಿಗಳಿಂದ ಅಸಕ್ತಿಯ ಅಭಿವ್ಯಕ್ತಿಯನ್ನು ಆಹ್ವಾನಿಸಿದೆ.







