ಮೈಸೂರು | 25 ಕೋಟಿ ರೂ. ಮೌಲ್ಯದ ಅಂಬರ್ ಗ್ರೀಸ್ ವಶ: ಮೂವರ ಬಂಧನ

ಮೈಸೂರು, ಮೇ 23: 25 ಕೋಟಿ ರೂ. ಮೌಲ್ಯದ ಅಂಬರ್ ಗ್ರೀಸ್(Ambergris) (ತಿಮಿಂಗಿಲ ವಾಂತಿ) ಮಾರಾಟ ಮಾಡಲು ಯತ್ನಿಸಿದ ಮೂವರನ್ನು ಎಚ್.ಡಿ.ಕೋಟೆ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಇಬ್ಬರು ನಾವಿಕರು ಹಾಗೂ ಎಚ್.ಡಿ.ಕೋಟೆಯ ಓರ್ವ ಸೇರಿದಂತೆ ಮೂವರು ಆರೋಪಿಗಳನ್ನು ಎಚ್.ಡಿ.ಕೋಟೆ ಪೊಲೀಸರು ಹಾಗೂ ಜಿಲ್ಲಾ ಸೆನ್ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಟ್ಕರ್ ಮಾರ್ಗದರ್ಶನದಲ್ಲಿ ಬಂಧಿಸಿದ್ದಾರೆ.
ಕೇರಳದ ಕೊಚ್ಚಿ ಸಮುದ್ರದಿಂದ ತರಲಾಗಿದೆ ಎಂದು ಹೇಳಲಾಗಿರುವ ಅಂಬರ್ ಗ್ರೀಸ್ ಅನ್ನು ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ಹ್ಯಾಂಡ್ ಪೋಸ್ಟ್ ಬಳಿ ಕಾರಿನಲ್ಲಿ ಬಂದು ಮಾರಾಟ ಮಾಡಲು ಆರೋಪಿಗಳು ಮುಂದಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಕಾರೊಂದನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಿಂದ ವಶಪಡಿಸಿಕೊಂಡಿರುವ ವಸ್ತು ಅಂಬರ್ ಗ್ರೀಸ್ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದು, ಅದರ ಮೌಲ್ಯ ಸುಮಾರು 25 ಕೋಟಿ ರೂ. ಎಂದು ಅಂದಾಜಿಸಿದ್ದಾರೆ.
ಬಂಧಿತ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಅಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಟ್ಕರ್ ತಿಳಿಸಿದ್ದಾರೆ.





