ಪಡುಕೆರೆ: ಸಿದ್ದರಾಮಯ್ಯ, ಡಿಕೆಶಿ ಫ್ಲೆಕ್ಸ್‌ಗೆ ಕಿಡಿಗೇಡಿಗಳಿಂದ ಹಾನಿ

ಮಲ್ಪೆ: ರಾಜ್ಯದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಶುಭಕೋರಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಮಲ್ಪೆ ಪಡುಕರೆ ಸೇತುವೆ ಬಳಿ ಹಾಕಿದ್ದ ಫ್ಲೆಕ್ಸ್‌ಗೆ ಕಿಡಿಗೇಡಿಗಳು ಹಾನಿ ಎಸಗಿರುವ ಬಗ್ಗೆ ವರದಿಯಾಗಿದೆ.
ಕಿಡಿಗೇಡಿಗಳು ಮೇ 22ರಂದು ರಾತ್ರಿ ವೇಳೆ ಫ್ಲೆಕ್ಸ್‌ಗಳನ್ನು ಹರಿದು ಹಾಕಿ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ. ಆದರೆ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.
‘ಪಡುಕರೆಗೆ ಶಾಲೆ, ರಸ್ತೆ, ನಲ್ಲಿ ನೀರು, ವಿದ್ಯುತ್, ಸಮುದ್ರಕ್ಕೆ ತಡೆಗೋಡೆ, ಮಲ್ಪೆ ಬಂದರು, ಸಬ್ಸಿಡಿ, ಸೇತುವೆ, ಪಡಿತರ ಕೇಂದ್ರ ಇಂತಹ ಹಲವಾರು ಅಭಿವೃದ್ಧಿ ಯೋಜನೆಗಳನ್ನು ನೀಡಿರುವುದು ಕಾಂಗ್ರೆಸ್ ಸರಕಾರವೇ ಹೊರತು ಬೇರೆ ಪಕ್ಷಗಳಲ್ಲ. ಫ್ಲೆಕ್ಸ್ ಹರಿಯುವ, ಮತ್ತೊಬ್ಬನನ್ನು ತುಳಿಯುವ, ವ್ಯಕ್ತಿ - ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಸರ್ವಾಧಿಕಾರದ ಈ ಕೃತ್ಯ ನಿಲ್ಲಬೇಕು. ಸಂಬಂಧಪಟ್ಟವರು ಕೂಡಲೇ ಕ್ರಮ ತೆಗೆದುಕೊಳ್ಳ ಬೇಕೆಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ.