ನ್ಯಾಯ, ಸತ್ಯದ ಪರ ನಿಲ್ಲುವವರ ವಿರುದ್ಧ ಭಯದ ವಾತಾವರಣ ಸೃಷ್ಟಿ: ನಟ ಕಿಶೋರ್ ಕುಮಾರ್
''ಪದಕ ಗೆದ್ದಾಗ ಅಭಿನಂದಿಸಿದ ಪ್ರಧಾನಿ ಮೋದಿ ಇಂದು ಮೌನವಾಗಿದ್ದಾರೆ'' ► ಮಹಿಳಾ ಕುಸ್ತಿಪಟುಗಳ ಹೋರಾಟ ಬೆಂಬಲಿಸಿ AIMSS ರಾಜ್ಯಮಟ್ಟದ ಸಮಾವೇಶ

ಬೆಂಗಳೂರು, ಮೇ 23: ‘ಪ್ರಜಾಪ್ರಭುತ್ವದ ದೇಶದಲ್ಲಿ ನ್ಯಾಯ ಮತ್ತು ಸತ್ಯದ ಪರವಾಗಿ ನಿಲ್ಲುವವರ ವಿರುದ್ಧ ಒಂದು ರೀತಿಯ ಭಯದ ವಾತಾವರಣವನ್ನು ಸೃಷ್ಟಿಸಲಾಗಿದ್ದು, ಇಂತಹ ಸರ್ವಾಧಿಕಾರಿ ಧೋರಣೆಯನ್ನು ಮುರಿಯಬೇಕು’ ಎಂದು ಚಲನಚಿತ್ರ ನಟ ಕಿಶೋರ್ ಕುಮಾರ್ ತಿಳಿಸಿದ್ದಾರೆ.
ಮಂಗಳವಾರ ಕೆ.ಆರ್.ವೃತ್ತದಲ್ಲಿನ ಅಲುಮ್ನಿ ಹಾಲ್‍ನಲ್ಲಿ ದಿಲ್ಲಿಯಲ್ಲಿನ ಮಹಿಳಾ ಕುಸ್ತಿಪಟುಗಳ ಹೋರಾಟವನ್ನು ಬೆಂಬಲಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ವತಿಯಿಂದ ನಡೆದ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ‘ಜಾತಿ, ಧರ್ಮದ ಆಧಾರದಲ್ಲಿ ದೇಶವನ್ನು ಹೊಡೆಯಲಾಗಿದ್ದು, ಅನ್ಯಾಯಗಳ ಬಗ್ಗೆ ಪ್ರಶ್ನಿಸುವ ಮನಸ್ಥಿತಿಗಳು ಕಡಿಮೆಯಾಗುತ್ತಿವೆ. ಮುಂದಾದರೂ ಜನರನ್ನು ಹೊಡೆದು ಅಧಿಕಾರ ಗಿಟ್ಟಿಸಿಕೊಳ್ಳುವ ರಾಜಕಾರಣಿಗಳ ವಿಕೃತ ನೀತಿಯನ್ನು ಶಮನಗೊಳಿಸಬೇಕು’ ಎಂದರು.
ಒಬ್ಬ ಮನುಷ್ಯನಾಗಿ ಮಹಿಳಾ ಕುಸ್ತಿಪಟುಗಳ ಹೋರಾಟವನ್ನು ಬೆಂಬಲಿಸುತ್ತೇನೆ ಏಕೆಂದರೆ ಅವರ ಹೋರಾಟ ನ್ಯಾಯಬದ್ಧವಾಗಿದೆ. ವಿಶ್ವ ಮಟ್ಟದಲ್ಲಿ ಪದಕವನ್ನು ಗಳಿಸಲು ಅದರದ್ದೇ ಶ್ರಮ ಇರುತ್ತದೆ. ಅಷ್ಟು ಎತ್ತರಕ್ಕೆ ಸಾಧನೆ ಮಾಡಿದ ಕುಸ್ತಿಪಟುಗಳು ಇಂದು ಬೀದಿಯಲ್ಲಿರುವುದು ನೋವಿನ ಸಂಗತಿ ಎಂದು ಕಿಶೋರ್ ತಿಳಿಸಿದರು.
ಹೋರಾಟ ನಿರಂತರವಾಗಿದ್ದರೆ ಜಯ ಖಂಡಿತವಾಗಿಯೂ ಸಿಗುತ್ತದೆ. ನಾವು ಗಾಂಧಿ ಮಾದರಿಯ ಶಾಂತಿ, ಅಹಿಂಸೆಯ ಹೋರಾಟಗಳಿಂದ ಗೆಲುವನ್ನು ಕಾಣಬಹುದು. ಆ ನಿಟ್ಟಿನಲ್ಲಿ ಕುಸ್ತಿಪಟುಗಳ ಹೋರಾಟ ಮುಂದಯವರಿಯಲಿ ಎಂದು ಕಿಶೋರ್ ಹೇಳಿದರು.
ಅಥ್ಲೆಟ್ ಹಾಗೂ ಅರ್ಜುನ್ ಪ್ರಶಸ್ತಿ ವಿಜೇತೆ ರೀತ್ ಅಬ್ರಾಹಂ ಮಾತನಾಡಿ, ಕ್ರೀಡಾ ಕ್ಷೇತ್ರಕ್ಕೆ ರಾಜಕೀಯ ಪ್ರವೇಶಿಸಿದೆ. ರಾಜಕೀಯ ವ್ಯಕ್ತಿಗಳು ಅಧಿಕಾರವನ್ನು ಹಿಡಿಯಲು ಯತ್ನಿಸುತ್ತಿದ್ದಾರೆ. ಕ್ರೀಡೆ ಬಗ್ಗೆ ಏನು ಗೊತ್ತಿಲ್ಲದವರು ಇಂದು ಫೆಡರೇಶನ್ ಅಧ್ಯಕ್ಷರಾಗಿದ್ದಾರೆ. ಕ್ರೀಡಾ ಕ್ಷೇತ್ರಕ್ಕೆ ರಾಜಕೀಯದ ಅವಶ್ಯಕತೆ ಇಲ್ಲ ಬದಲಿಗೆ ಅವರ ಬೆಂಬಲ ಬೇಕಷ್ಟೇ ಎಂದರು.
ಐಎಎಸ್ ಅಧಿಕಾರಿ ಪಲ್ಲವಿ ಅಕುರಾತಿ ಮಾತನಾಡಿ, ಯಾವುದೇ ಹುದ್ದೆ, ಸ್ಥಾನದಲ್ಲಿದ್ದರೂ ಕೂಡ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ವಿಷಯ ಪ್ರಜಾತಾಂತ್ರಿಕ ವ್ಯವಸ್ಥೆಯ ಹೃದಯ. ಆದರೆ ಅದೇ ಇಂದು ತಲೆಕೆಳಗಾಗಿದೆ. ಆರೋಪಿ ಪ್ರಭಾವಿ ವ್ಯಕ್ತಿಯಾಗಿದ್ದರೆ ಪ್ರಕರಣ ದಾಖಲಿಸಲು ಅರ್ಧ ವರ್ಷವೇ ಬೇಕಾಗುತ್ತದೆ. ಇನ್ನು ತನಿಖೆ, ಶಿಕ್ಷೆ, ನ್ಯಾಯ ದೂರದ ಮಾತು. ಬಂಗಾರದ ಪದಕ ತಂದಂತಹ ಹೆಣ್ಣು ಮಕ್ಕಳ ಪರಿಸ್ಥಿತಿಯೇ ಹೀಗಾದರೆ, ಇನ್ನು ಸಾಮಾನ್ಯ ಹೆಣ್ಣು ಮಕ್ಕಳ ಗತಿಯೇನು ಎಂದು ಪ್ರಶ್ನಿಸಿದರು.
ಈ ಲೈಂಗಿಕ ದೌರ್ಜನ್ಯ ಕೇವಲ ಕ್ರೀಡಾ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಎಲ್ಲಾ ಕ್ಷೇತ್ರಗಳಿಗೂ ಹಬ್ಬಿದೆ. ಬಿಹಾರದ ಒಬ್ಬ ಹಿರಿಯ ಪುರುಷ ಐಆರ್‍ಎಸ್ ಅಧಿಕಾರಿ ಇನ್ನೊಬ್ಬ ಮಹಿಳಾ ಐಎಎಸ್ ಅಧಿಕಾರಿಗೆ ಕಿರುಕುಳ ಕೊಟ್ಟಿರುವುದರ ಬಗ್ಗೆ ಪ್ರಕರಣ ದಾಖಲಾಗಿ ಆರೋಪಿಯನ್ನು ಬಂಧಿಸಲಾಗಿದೆ. ಇಂತಹ ಹಲವಾರು ಪ್ರಕರಣಗಳನ್ನು ನಾನು ನೋಡಿದ್ದೇನೆ. ಕಾನೂನು ತನ್ನ ಪಾತ್ರವನ್ನು ಸರಿಯಾಗಿ ನಿಭಾಯಿಸದೆ ಹೋದರೆ ಹೆಣ್ಣಿನ ಮೇಲಿನ ದೌರ್ಜನ್ಯ ಸಾಮಾನ್ಯ ಸಂಗತಿ ಆಗುತ್ತದೆ ಎಂದು ಪಲ್ಲವಿ ಅಕುರಾತಿ ಕಳವಳ ವ್ಯಕ್ತಪಡಿಸಿದರು.
ಎಐಎಂಎಸ್‍ಎಸ್ ರಾಜ್ಯ ಅಧ್ಯಕ್ಷೆ ಅಪರ್ಣ ಬಿ.ಆರ್. ಮಾತನಾಡಿ, ಈ ಪ್ರಕರಣದ ಆರೋಪಿ ಬ್ರಿಜ್ ಭೂಷನ್ ಶರಣ್ ಸಿಂಗ್ ನನ್ನು ಬಂಧಿಸಬೇಕು ಎಂದು ಎಷ್ಟೇ ಒತ್ತಾಯಿಸಿದರೂ ಸರಕಾರವಾಗಲಿ, ಪೊಲೀಸ್ ವ್ಯವಸ್ಥೆಯಾಗಲಿ ಅದಕ್ಕೆ ಕಿವಿ ಕೊಡಲಿಲ್ಲ. ಸರಕಾರದ ಇಂತಹ ಧೋರಣೆ ಹೊಸದೇನಲ್ಲ. ಈಗಾಗಲೇ ಉನ್ನಾವೋ, ಹತ್ರಾಸ್ ಮತ್ತು ಬಿಲ್ಕಿಸ್ ಬಾನೋ ಪ್ರಕರಣಗಳಲ್ಲಿ ಸರಕಾರ ಅಪರಾಧಿಗಳ ರಕ್ಷಣೆಗೆ ಪಣತೊಟ್ಟು ನಿಂತಿದ್ದು ಸಾಬೀತಾಗಿದೆ. ಇಂತಹ ವಾತಾವರಣದಲ್ಲಿ ದುಷ್ಟ ಶಕ್ತಿಗಳ ವಿರುದ್ಧ ಹೆಣ್ಣು ಮಕ್ಕಳು ಧೈರ್ಯದಿಂದ ಧ್ವನಿ ಎತ್ತುತ್ತಿರುವುದು ಆಶಾದಾಯಕ ವಿಷಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಶೋಭಾ, ರಾಜ್ಯ ಉಪಾಧ್ಯಕ್ಷೆ ಎಂ.ಎನ್. ಮಂಜುಳಾ, ಡಾ ಮೇರಿ ಜಾನ್ ಸೇರಿದಂತೆ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
''‘ದೇಶ್ ಆಪ್ಕೆ ಸಾಥ್ ಹೈ' ಎಂಬ ಮಾತು ಸುಳ್ಳಾಗಿದೆ''
‘ದೇಶ್ ಆಪ್ಕೆ ಸಾತ್ ಹೈ' ಎಂಬ ಮಾತು ಸುಳ್ಳಾಗಿದೆ. ಪದಕ ಗೆದ್ದಾಗ ಅಭಿನಂದಿಸಿದ ಪ್ರಧಾನಿ ಮೋದಿ ಅವರು ಇಂದು ಮೌನವಾಗಿದ್ದಾರೆ. ಹೀಗೆ ಅವರು ಬಹು ಮುಖ್ಯವಾದ ರಾಜಕೀಯ ವಿಷಯಗಳಾದ ರಫೆಲ್, ಪೆಗಾಸಸ್, ಪುಲ್ವಾಮಾ, ರೈತ ಚಳುವಳಿ ಬಗ್ಗೆ, ಅದಾನಿ ಸಾಮ್ರಾಜ್ಯದ ಕುಸಿತದ ಬಗ್ಗೆ ಮಾತನಾಡಲೇ ಇಲ್ಲ. ಈಗ ಈ ವಿಷಯದಲ್ಲೂ ಕೂಡ ಹಾಗೆಯೇ. ಕರ್ನಾಟಕಕ್ಕೆ ಬಂದು ಮತ ಭಿಕ್ಷೆ ಬೇಡುವವರು ಇಂದು ಎಲ್ಲಿದ್ದಾರೆ.
-ಕಿಶೋರ್ ಕುಮಾರ್. ಚಲನಚಿತ್ರ ನಟ.








