ವಿವಾದಾತ್ಮಕ ಅಧಿಸೂಚನೆ ಹಿಂಪಡೆದು ಪರಿಷ್ಕೃತ ನೇಮಕಾತಿ ಅಧಿಸೂಚನೆ ಹೊರಡಿಸಿದ 'ತುಮುಲ್'
'ವಾರ್ತಾಭಾರತಿ' ವರದಿ ಫಲಶ್ರುತಿ

ತುಮಕೂರು.ಮೇ.23: ತುಮುಲ್ ತನಗೆ ಅಗತ್ಯವಿರುವ ಸುಮಾರು 219 ನೌಕರರ ನೇಮಕಕ್ಕೆ ಹೊರಡಿಸಿದ್ದ, ವಿವಾದಾತ್ಮಕ ಅಧಿಸೂಚನೆ ಹಿಂಪಡೆದು ಪರಿಷ್ಕೃತ ಹೊಸ ಅಧಿಸೂಚನೆ ಹೊರಡಿಸಿದೆ.
ತುಮುಲ್ ವಿರುದ್ದ ಕಾನೂನು ಹೋರಾಟ ನಡೆಸಿದ್ದ ಅಭ್ಯರ್ಥಿಗಳ ಕುರಿತು 'ವಾರ್ತಾಭಾರತಿ' ಪತ್ರಿಕೆ ವಿಸ್ತೃತ ಸುದ್ದಿ ಪ್ರಕಟಿಸಿತ್ತು.
ಇನ್ನೇನು ಚುನಾವಣಾ ದಿನಾಂಕ ಘೋಷಣೆಯಾಗುತ್ತದೆ ಎಂಬ ಸಮಯದಲ್ಲಿ ತುಮಕೂರು ಹಾಲು ಉತ್ಪಾಧಕರ ಸಹಕಾರ ಸಂಘಗಳ ಒಕ್ಕೂಟ(ರಿ), (ತುಮುಲ್) ತನಗೆ ಅಗತ್ಯವಿರುವ ಸುಮಾರು 219 ವಿವಿಧ ವೃಂದದ ನೌಕರರ ನೇಮಕಕ್ಕೆ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು,ಇದರಲ್ಲಿ ಕಾನೂನು ಬಾಹಿರವಾಗಿ ಸುಮಾರು 78 ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ನೌಕರರಿಗೆ ಮೀಸಲು ಕಲ್ಪಿಸಿ,ಸಾಮಾನ್ಯ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಗದಂತಹ ನಿಯಮವನ್ನು ರೂಪಿಸಿದ್ದರು.

ಈ ವಿಚಾರವಾಗಿ ಪದವಿ ಮುಗಿಸಿ ನೌಕರಿ ಅರಸುತ್ತಿರುವ ನೂರಾರು ಅಭ್ಯರ್ಥಿಗಳು ತುಮುಲ್ ಹೊರಡಿಸಿರುವ ನೇಮಕಾತಿ ಅಧಿಸೂಚನೆ ಕಾನೂನು ಬಾಹಿರವಾಗಿದ್ದು, ಕೆ.ಎಂ.ಎಫ್.ಅಧೀನಕ್ಕೆ ಒಳಪಡುವ ಯಾವ ಒಕ್ಕೂಟದಲ್ಲಿಯೂ ಇಲ್ಲದ ಹೊರಗುತ್ತಿಗೆ ನೌಕರರ ಮೀಸಲಾತಿಯನ್ನು,ತುಮುಲ್‍ನಲ್ಲಿ ತಂದಿರುವ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿ,ಅಧಿಸೂಚನೆ ಹಿಂಪಡೆ ಯುವಂತೆ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಗೆ ವಿನಂತಿ ಮಾಡಿದರೂ ಜಗ್ಗದ ಹಿನ್ನೇಲೆಯಲ್ಲಿ ನ್ಯಾಯಾಲಯದ ಮೆಟ್ಟಿಲು ಏರಿದ ಪರಿಣಾಮ ರಾಜ್ಯ ಹೈಕೋರ್ಟು ನೇಮಕಾತಿ ಅಧಿಸೂಚನೆಗೆ ತಡೆಯಾಜ್ಞೆ ನೀಡಿತ್ತು.ಅಲ್ಲದೆ ಕಾನೂನು ಸೇವಾ ಪ್ರಾಧಿಕಾರ ಸಹ ಈ ಬಗ್ಗೆ ಅಕ್ಷೇಪಣೆ ವ್ಯಕ್ತಪಡಿಸಿತ್ತು.
ಒಂದೆಡೆ ಹೈಕೋರ್ಟು ತಡೆಯಾಜ್ಞೆ ಮತ್ತು ಮತ್ತೊಂದೆಡೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಕ್ಷೇಪಣೆಯಿಂದ ಎಚ್ಚೆತ್ತ ತುಮಕೂರು ಹಾಲು ಒಕ್ಕೂಟ ಮುಂದಾಗಬಹುದಾದ ಕಾನೂನು ಕ್ರಮದ ಬಗ್ಗೆ ಅರಿತು ಈ ಹಿಂದೆ ಅಂದರೆ 17-03-2023ರಂದು ಹೊರಡಿಸಿದ್ದ ತುಹಾಒ/ಸಿಬ್ಬಂದಿ-03/ಎಸ್.ಎಂ.-56/ನೇ.ನೇ/2023-24 ನೇಮಕಾತಿ ಅಧಿಸೂಚನೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಸಮಾಲೋಚಕರು, ಗುತ್ತಿಗೆ ಸಿಬ್ಬಂದಿಗಳು ,ಡೇಟಾ ಎಂಟ್ರಿ ಅಪರೇಟರ್‍ಗಳಿಗೆ ನೀಡಿದ್ದ ಮೀಸಲಾತಿಯನ್ನು ಮಾರ್ಪಾಡು ಮಾಡಿ, 21-05-2023 ರಂದು ಹೊಸ ತಿದ್ದುಪಡಿ ಅಧಿಸೂಚನೆಯನ್ನು ಹೊರಡಿಸಿದೆ.
ಹಳೆಯ ನೇಮಕಾತಿ ಅಧಿಸೂಚನೆಯ ಪ್ರಕಾರ ತುಮುಲ್‍ನಲ್ಲಿ ಖಾಲಿ ಇದ್ದ ಸಮಾಲೋಚಕರು,ವಾಹನ ಚಾಲಕರು,ಮಾರುಕಟ್ಟೆ ಸಹಾಯಕ ಅಧಿಕಾರಿ ಸೇರಿದಂತೆ ಸುಮಾರು 78 ಹುದ್ದೆಗಳಿಗೆ ಈಗಾಗಲೇ ತುಮುಲ್‍ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹೊರಗುತ್ತಿಗೆ ನೌಕರರನ್ನು ಹೊರತು ಪಡಿಸಿದರೆ, ಬೇರೆಯವರು ಅರ್ಜಿಸಲ್ಲಿಸಲು ಅವಕಾಶವೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿತ್ತು. ಇದರ ಬಗ್ಗೆ ಹಲವಾರು ಅಭ್ಯರ್ಥಿಗಳು ಸಹಕಾರ ಇಲಾಖೆ,ಕೆ.ಎಂ.ಎಫ್ ಸೇರಿದಂತೆ ಹಲವು ಇಲಾಖೆಗಳಿಗೆ ಆಕ್ಷೇಪಣೆ ಸಲ್ಲಿಸಿದ್ದರೂ ಸಹ ಯಾರು ಗಮನಹರಿಸಿರಲಿಲ್ಲ. ಹಾಗಾಗಿ ತಮ್ಮ ಹಕ್ಕು ಪ್ರತಿಪಾದಿಸಲು ನಿರುದ್ಯೋಗಿ ಯುವಕರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಇದರ ಭಾಗವಾಗಿ ತುಮಕೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಹಳೆಯ ನೇಮಕಾರಿ ಅಧಿಸೂಚನೆಯಲ್ಲಿ ಮಾರ್ಪಾಡು ಮಾಡಿ,ಹೊಸ ಪರಿಷ್ಕೃತ ಅಧಿಸೂಚನೆ ಹೊರಡಿಸಿದೆ.
ತುಮುಲ್ ನೇಮಕಾತಿ ಅಧಿಸೂಚನೆಯಲ್ಲಿ ಕಾನೂನು ಬಾಹಿರ ಅಂಶಗಳನ್ನು ಇರುವುದನ್ನು ಮನಗಂಡ ವಾರ್ತಾಭಾರತಿ ಪತ್ರಿಕೆ ನಿರುದ್ಯೋಗಿ ಯುವಕ, ಯುವತಿಯರು,ಕಾನೂನು ತಜ್ಞರು ಹಾಗೂ ಆಡಳಿತ ಮಂಡಳಿಯ ಸದಸ್ಯರನ್ನು ಸಂಪರ್ಕಿಸಿ, ಮಾಹಿತಿ ಕಲೆ ಹಾಕಿ 23-03-2023ರಂದು ''ತುಮುಲ್ ನೇಮಕಾತಿಯಲ್ಲಿ ಅವ್ಯವಹಾರದ ಅನುಮಾನ ?'' ಎಂಬ ವಿಸ್ತೃತ ವರದಿ ಪ್ರಕಟಿಸಿತ್ತು.







