ಯುಪಿಎಸ್‍ಸಿ ಪರೀಕ್ಷೆಯಲ್ಲಿ ಮೈಸೂರಿನ ಎಂ.ಪೂಜಾಗೆ 390ನೇ ರ‍್ಯಾಂಕ್

ಮೈಸೂರು,ಮೇ 23: ಮೈಸೂರಿನ ಕುವೆಂಪುನಗರದ ಎಂ.ಪೂಜಾ, ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2022ರ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ 390ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.
ಕಳೆದ ಬಾರಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಸಂದರ್ಶನ ಹಂತದವರೆಗೂ ಹೋಗಿದ್ದರು. ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿರಲಿಲ್ಲ. ಎರಡನೇ ಬಾರಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ್ದಾರೆ. ಅವರು ಮುಕುಂದ ಹಾಗೂ ಪದ್ಮಾವತಿ ದಂಪತಿ ಪುತ್ರಿ.
ಕುವೆಂಪುನಗರದ ಕಾವೇರಿ ಶಾಲೆಯಲ್ಲಿ 1ರಿಂದ 10ನೇ ತರಗತಿವರೆಗೆ, ಮರಿಮಲ್ಲಪ್ಪ ಪಿಯು ಕಾಲೇಜಿನಲ್ಲಿ ಪಿಯು ಹಾಗೂ ಗೋಕುಲಂನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಯಾವುದೇ ಕೋಚಿಂಗ್ ಕೇಂದ್ರಗಳಲ್ಲಿ ತರಬೇತಿ ಪಡೆಯದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ವಿಶೇಷ.
2019ರಲ್ಲಿ ಪದವಿ ಮುಗಿಸಿದೆ. 2020 ಡಿಸೆಂಬರ್ ನಿಂದ ತಯಾರಿ ಆರಂಭಿಸಿದೆ. ಅಣಕು ಪರೀಕ್ಷೆಗಳನ್ನು ತೆಗೆದುಕೊಂಡಿದ್ದೆ. ಈ ಬಾರಿ ಸಂದರ್ಶನ ತರಬೇತಿಯನ್ನು ಮಾತ್ರ ಬೆಂಗಳೂರಿನ ಇನ್‍ಸೈಟ್ಸ್ ಆನ್ ಇಂಡಿಯಾದಲ್ಲಿ ಪಡೆದೆ. ಐಎಎಸ್ ಅಥವಾ ಐಪಿಎಸ್ ಹುದ್ದೆ ಸಿಗುವ ನಿರೀಕ್ಷೆ ಇದೆ ಎಂದು ಪೂಜ ಮಾಧ್ಯಮದವರ ಜೊತೆ ತಮ್ಮ ಅನಿಸಿಕೆ ಹಂಚಿಕೊಂಡರು.
ಶಿಸ್ತು ಹಾಗೂ ಶ್ರಮವನ್ನು ಪರೀಕ್ಷೆಯು ಬೇಡುತ್ತದೆ. ಉತ್ತಮವಾಗಿ ತಯಾರಿ ನಡೆಸಿದ್ದರೆ, ಯಾವುದಕ್ಕೂ ತಲೆ ಕೆಡಿಸಿಕೊಳ್ಳಬಾರದು. ಧೈರ್ಯದಿಂದ ಮುನ್ನುಗ್ಗಬೇಕು ಎಂದು ಹೇಳಿದರು.







