ಕಿದಿಯೂರು ಗ್ರಾಮದಲ್ಲಿ ಟ್ಯಾಂಕರ್ ನೀರಿಲ್ಲದಿದ್ದರೇ ಉಪ್ಪು ನೀರೇ ಗತಿ
ಮೂರು ದಿನಕ್ಕೊಮ್ಮೆ ಪ್ರತಿ ಮನೆಗೆ 300 ಲೀಟರ್ ನೀರು !

ಉಡುಪಿ, ಮೇ 23: ಪ್ರತಿಮನೆಗೆ ಮೂರು ದಿನಕ್ಕೆ 300 ಲೀಟರ್ ನೀರು, ಉಪ್ಪಿನಾಂಶದಿಂದಾಗಿ ಬಾವಿಯಲ್ಲಿ ನೀರಿದ್ದರೂ ಬಳಸುವಂತಿಲ್ಲ, ರಸ್ತೆ ಕಿರಿದಾದ ಪರಿಣಾಮ ನೀರಿನ ಟ್ಯಾಂಕರ್ ಕೂಡ ಮನೆಯವರೆಗೆ ಬರುತ್ತಿಲ್ಲ, ಗ್ರಾಮಾಂತರ ಪ್ರದೇಶವಾಗಿದ್ದರೂ ವಾರಕ್ಕೆ 1200 ರೂ. ಹಣ ಪಾವತಿಸಿ ನೀರು ಪಡೆಯಬೇಕು....!
ಇದು ಉಡುಪಿ ನಗರಸಭೆಯ ಹತ್ತಿರದಲ್ಲೇ ಇರುವ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿದಿಯೂರು ಗರಡಿ ರಸ್ತೆ, ಸಂಕೇಶ ರಸ್ತೆ, ಕಿದಿಯೂರು ಪಡುಕೆರೆ, ದಡ್ಡಿ ರಸ್ತೆಯಲ್ಲಿರುವ ನೂರಾರು ಮನೆಗಳ ಸದ್ಯದ ಪರಿಸ್ಥಿತಿ. ಒಟ್ಟಾರೆಯಾಗಿ ಇಡೀ ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಉಲ್ಬಣ ಗೊಂಡಿದ್ದು, ಜನ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಈವರೆಗೆ ಉಡುಪಿ ನಗರಸಭೆ ಹಾಗೂ ಸುತ್ತಮುತ್ತಲಿನ ಗ್ರಾಪಂಗಳಿಗೆ ಬಜೆ ಡ್ಯಾಂನಿಂದಲೇ ನೀರನ್ನು ಪೂರೈಸ ಲಾಗುತ್ತಿತ್ತು. ಆದರೆ ಈ ಬಾರಿ ಮಳೆ ಇಲ್ಲದೆ ಬಜೆಯಲ್ಲೂ ನೀರಿನ ಕೊರತೆ ಎದುರಾಗಿರುವುದರಿಂದ ಕೆಲವು ತಿಂಗಳ ಹಿಂದೆಯೇ ನಗರಸಭೆಯು ಸುತ್ತಮುತ್ತಲ ಗ್ರಾಪಂಗಳಿಗೆ ಪೂರೈಸಲಾಗುತ್ತಿದ್ದ ನೀರನ್ನು ಸ್ಥಗಿತಗೊಳಿಸಿತ್ತು. ಇಲ್ಲಿಂದಲೇ ಅಂಬಲಪಾಡಿ ಗ್ರಾಪಂ ವ್ಯಾಪ್ತಿಯಲ್ಲಿ ನೀರಿಗಾಗಿ ಹಾಹಾಕಾರ ಆರಂಭವಾಯಿತು.
ಪ್ರತಿಮನೆಗೆ 300ಲೀ. ನೀರು: ನಗರಸಭೆ ನೀರನ್ನು ನಂಬಿದ್ದ ಅಂಬಲಪಾಡಿ ಗ್ರಾಪಂಗೆ ತನ್ನ ವ್ಯಾಪ್ತಿಯಲ್ಲಿ ಯಾವುದೇ ನೀರಿನ ಮೂಲವೇ ಇಲ್ಲದ ಕಾರಣ ಟ್ಯಾಂಕರ್ ನೀರಿನ ಮೊರೆ ಹೋಗಬೇಕಾಯಿತು. ಅದರಂತೆ ಟ್ಯಾಂಕರ್ ಮೂಲಕ ಒಂದು ಮನೆಗೆ 300ಲೀಟರ್‌ನಂತೆ ನೀರನ್ನು ಸರಬರಾಜು ಮಾಡಲಾಗುತ್ತಿದೆ.
ಈ ಎಲ್ಲ ಕ್ರಮ ತೆಗೆದುಕೊಂಡರೂ ಗ್ರಾಪಂ ವ್ಯಾಪ್ತಿಯ ಕಿದಿಯೂರು ಗರಡಿ ರಸ್ತೆ, ಸಂಕೇಶ ರಸ್ತೆ, ಕಿದಿಯೂರು ಪಡುಕೆರೆ, ದಡ್ಡಿ ರಸ್ತೆಯಲ್ಲಿ ನೀರಿನ ಸಮಸ್ಯೆ ಇನ್ನಷ್ಟು ಬಿಗಾಡಯಿಸಿದೆ. ಇಲ್ಲಿನ ಬಹುತೇಕ ಮನೆಗಳಲ್ಲಿ ಬಾವಿ ಇದ್ದರೂ ನೀರು ಮಾತ್ರ ಪಾತಾಳಕ್ಕೆ ಇಳಿದಿದ್ದು, ಇದರಿಂದ ಉಪ್ಪು ನೀರೆ ಸಿಗುವಂತಾಗಿದೆ.
ಇಲ್ಲಿನ ಕೆಲವೊಂದು ಮನೆಗಳಿಗೆ ಸರಿಯಾದ ರಸ್ತೆಗಳೇ ಇಲ್ಲದ ಪರಿಣಾಮ ಪಂಚಾಯತ್‌ನ ಟ್ಯಾಂಕರ್‌ಗಳು ಕೂಡ ಹೋಗುತ್ತಿಲ್ಲ. ಇನ್ನು ಕೆಲವು ಮನೆಯಲ್ಲಿ ಗ್ರಾಪಂ ನೀಡುವ ನೀರನ್ನು ಸಂಗ್ರಹಿಸಲು ಸರಿಯಾದ ವ್ಯವಸ್ಥೆ ಇಲ್ಲದೇ ಇರುವು ದರಿಂದ ಖಾಸಗಿ ಟ್ಯಾಂಕರ್‌ಗಳ ಮೊರೆ ಹೋಗುವಂತಾಗಿದೆ.
‘ಗ್ರಾಪಂನವರು ಮನೆಯ ಟ್ಯಾಂಕ್‌ಗಳಿಗೆ ನೇರವಾಗಿ ನೀರು ಪೂರೈಕೆ ಮಾಡಲ್ಲ. ನಮ್ಮ ಮನೆಯಲ್ಲಿ ಟ್ಯಾಂಕ್ ಬಿಟ್ಟರೆ ನೀರು ತುಂಬಿಸಿ ಇಡಲು ಬೇರೆ ವ್ಯವಸ್ಥೆ ಇಲ್ಲ. ಹಾಗಾಗಿ ನಾವು ಖಾಸಗಿಯವರಿಂದ 3000 ಲೀಟರ್ ನೀರಿಗೆ 600ರೂ. ಹಣ ಪಾವತಿಸಿ ನೀರು ಪಡೆಯುತ್ತಿದ್ದೇವೆ. ಈ ನೀರು ಮೂರೇ ದಿನಗಳಲ್ಲಿ ಖಾಲಿಯಾಗುತ್ತಿದೆ. ಇದೆ ರೀತಿಯ ಸಮಸ್ಯೆ ಹಲವು ಮನೆಯವರು ಎದುರಿಸುತ್ತಿದ್ದಾರೆ’ ಎನ್ನುತ್ತಾರೆ ಕಿದಿಯೂರು ಗರಡಿ ರಸ್ತೆಯ ನಿವಾಸಿ ಸಂತೋಷ್ ಕುಮಾರ್.
5 ದಿನಗಳಿಗೊಮ್ಮೆ ನೀರು: ಸದ್ಯ ಗ್ರಾಪಂನಿಂದ ಮೂರು ದಿನಗಳಿಗೊಮ್ಮೆ 300ಲೀಟರ್ ನೀರು ಪೂರೈಕೆ ಮಾಡುತ್ತಿದ್ದರೂ ಕೆಲವು ಕಡೆಗಳಲ್ಲಿ ಐದು ದಿನಗಳಿಗೊಮ್ಮೆ ನೀರು ಬರುತ್ತಿದೆ ಎಂಬ ಆರೋಪಗಳು ಕೂಡ ಕೇಳಿಬರುತ್ತಿವೆ.
‘ನಳ್ಳಿಯಿಂದ ನೀರು ಬಾರದೆ ಎರಡು ತಿಂಗಳಾಗಿದೆ. ಪಂಚಾಯತ್‌ನಿಂದ ಕೆಲವೊಂದು ಬಾರಿ ಐದು ದಿನಗಳಿಗೊಮ್ಮೆಯೂ ನೀರು ಬರುತ್ತದೆ. ಆ ಸಮಯ ದಿಂದ ತುಂಬಾ ತೊಂದರೆಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಅನಿವಾರ್ಯವಾಗಿ ಬಾವಿಯಲ್ಲಿರುವ ಉಪ್ಪು ನೀರನ್ನೇ ಬಳುವಂತಾಗಿದೆ’ ಎಂದು ಗ್ರಾಮಸ್ಥರೊಬ್ಬರು ಅಳಲು ತೋಡಿಕೊಂಡರು.
‘ನಮ್ಮ ಮನೆಗೆ ಟ್ಯಾಂಕರ್ ಬರಲು ಸರಿಯಾದ ದಾರಿ ಇಲ್ಲ. ಹಾಗಾಗಿ ಮನೆಯಿಂದ 500 ಮೀಟರ್ ದೂರದ ಗದ್ದೆ ಮಧ್ಯೆ ನಾವು ಇಟ್ಟಿದ್ದ ಟ್ಯಾಂಕಿಗಳಿಗೆ ಪಂಚಾಯತ್ ಟ್ಯಾಂಕರ್ ನೀರು ತುಂಬಿಸಿ ಹೋಗುತ್ತದೆ. ಅಲ್ಲಿಂದ ನಾವು ಕೊಡಪಾನದಿಂದ ಮನೆಗೆ ನೀರು ಹೊತ್ತು ಕೊಂಡು ಹೋಗಬೇಕಾಗಿದೆ. ಮನೆ ಯಲ್ಲಿ ಕಾರ್ಯಕ್ರಮ ಇದ್ದರೆ ನಮ್ಮ ಪಾಡು ಹೇಳಿ ಪ್ರಯೋಜನ ಇಲ್ಲ’ ಎಂದು ಗರಡಿ ರಸ್ತೆಯ ವಾರಿಜಾ ತಿಳಿಸಿದರು.
‘ಅಂಬಲಪಾಡಿ ಗ್ರಾಪಂಗೆ ಉಡುಪಿ ನಗರಸಭೆಯವರು ಈವರೆಗೆ ನೀರು ಪೂರೈಕೆ ಮಾಡುತ್ತಿದ್ದರು. ಆದರೆ ಈಗ ನಗರ ವ್ಯಾಪ್ತಿಯಲ್ಲಿಯೇ ನೀರಿನ ಅಭಾವ ಎದುರಾಗಿರುವುದರಿಂದ ಪಂಚಾಯತ್‌ಗೆ ನೀಡುವ ನೀರನ್ನು ನಿಲ್ಲಿಸಿದ್ದಾರೆ. ಹಾಗಾಗಿ ನೀರಿನ ಸಮಸ್ಯೆ ಉಂಟಾಗಿದೆ. ಕಿದಿಯೂರು ಗರಡಿ ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ಮೂರು ದಿನಗಳಿಗೊಮ್ಮೆ ನೀರು ಸರಬರಾಜು ಮಾಡುತ್ತಿದ್ದೇವೆ. ಕೆಲವು ಕಡೆ ರಸ್ತೆ ಇಲ್ಲದ ಕಾರಣ ಮನೆಯವರೆಗೂ ಟ್ಯಾಂಕರ್ ಹೋಗುತ್ತಿಲ್ಲ. ಆದುದರಿಂದ ಅವರಿಗೆ ರಸ್ತೆ ಬದಿಯಲ್ಲಿ ಟ್ಯಾಂಕಿಗೆ ಇಡುವಂತೆ ಸೂಚಿಸಿ ನೀರು ತುಂಬಿಸಿ ಕೊಡುತ್ತಿದ್ದೇವೆ’
-ವಿಜಯಾ, ಕಾರ್ಯನಿರ್ವಹಣಾಧಿಕಾರಿ, ಉಡುಪಿ ತಾಪಂ
‘ನಗರಸಭೆಯವರು ನೀರು ಪೂರೈಕೆಯನ್ನು ಒಮ್ಮೇಲೆ ಸ್ಥಗಿತಗೊಳಿಸಿರುವುದರಿಂದ ಪಂಚಾಯತ್ ವ್ಯಾಪ್ತಿಯಲ್ಲಿ ತುಂಬಾ ನೀರಿನ ಸಮಸ್ಯೆ ಆಗಿದೆ. ಆದರೂ ಟ್ಯಾಂಕರ್ ಮೂಲಕ ಒಂದು ಮನೆಗೆ 300ಲೀಟರ್‌ನಂತೆ ನೀರನ್ನು ಸರಬರಾಜು ಮಾಡುತ್ತಿದ್ದೇವೆ. ಮಳೆ ಇಲ್ಲದೆ ಹೆಚ್ಚಿನ ನೀರು ಕೊಡುವ ಪರಿಸ್ಥಿತಿಯಲ್ಲಿ ಇಲ್ಲ. ಆದರೂ ನಾವು ಪ್ರಯತ್ನ ಮಾಡುತ್ತಿದ್ದೇವೆ. ಸ್ಥಳೀಯವಾಗಿ ಯಾವುದೇ ಮನೆಯ ಬಾವಿಯಲ್ಲೂ ನೀರಿಲ್ಲ. ದೂರದ ಸಂಪಿಗೆನಗರ ಹಾಗೂ ತೊಟ್ಟಂನಿಂದ ಟ್ಯಾಂಕರ್ ಮೂಲಕ ನೀರು ತರಿಸಿ ಮನೆ ಮನೆಗೆ ಕೊಡಲಾಗುತ್ತಿದೆ. ಅಲ್ಲದೆ ಟ್ಯಾಂಕರ್ ಸಂಖ್ಯೆ ಹೆಚ್ಚಿಸುವ ನಿರ್ಧಾರವನ್ನು ಗ್ರಾಪಂ ಸಭೆಯಲ್ಲಿ ಮಾಡಲಾಗಿದೆ’
-ಸುಂದರ ಪೂಜಾರಿ, ಸದಸ್ಯರು, ಅಂಬಲಪಾಡಿ ಗ್ರಾಪಂ