ದಿಲ್ಲಿ ಸರಕಾರದ ನಿಯಂತ್ರಣದ ಕುರಿತ ಕೇಂದ್ರದ ಅಧ್ಯಾದೇಶವನ್ನು ರಾಜ್ಯಸಭೆಯಲ್ಲಿ ಸೋಲಿಸಲು ಪ್ರತಿಪಕ್ಷಗಳಿಗೆ ಮಮತಾ ಕರೆ

ಕೋಲ್ಕತ, ಮೇ 23: ದಿಲ್ಲಿ ಸರಕಾರದ ನಿಯಂತ್ರಣವನ್ನು ತನ್ನ ಕೈಗೆ ತೆಗೆದುಕೊಳ್ಳುವ ಉದ್ದೇಶದಿಂದ ಕೇಂದ್ರ ಸರಕಾರ ಜಾರಿಗೊಳಿಸಿರುವ ದಿಲ್ಲಿ ರಾಷ್ಟ್ರ ರಾಜಧಾನಿ ಪ್ರದೇಶ ಸರಕಾರ (ತಿದ್ದುಪಡಿ) ಅಧ್ಯಾದೇಶ 2023ರ ವಿರುದ್ಧ ಹೋರಾಟ ನಡೆಸುತ್ತಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಜ್ಯಸಭೆಯಲ್ಲಿ ಈ ಅಧ್ಯಾದೇಶವನ್ನು ವಿರೋಧಿಸುವಂತೆ ಅವರು ಎಲ್ಲಾ ಪ್ರತಿಪಕ್ಷಗಳನ್ನು ಒತ್ತಾಯಿಸಿದ್ದಾರೆ.
2024ರ ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿಯನ್ನು ಸೋಲಿಸಲು ಈ ಅಧ್ಯಾದೇಶವು ಎಲ್ಲಾ ಪ್ರತಿಪಕ್ಷಗಳಿಗೆ ‘‘ದೊಡ್ಡ ಅವಕಾಶ’’ವೊಂದನ್ನು ಒದಗಿಸಿದೆ ಎಂದು ಮಮತಾ ಹೇಳಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಅರವಿಂದ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಮತ್ತು ಆಮ್ ಆದ್ಮಿ ಪಕ್ಷ (ಆಪ್)ದ ಇತರ ನಾಯಕರು ಉಪಸ್ಥಿತರಿದ್ದರು.
ಈ ಅಧ್ಯಾದೇಶಕ್ಕೆ ತಡೆ ಹೇರಲು ಪ್ರತಿಪಕ್ಷಕ್ಕೆ ಸಾಧ್ಯವಾದರೆ, ಅದು ಜನರಿಗೆ ಬಲವಾದ ಸಂದೇಶವೊಂದನ್ನು ನೀಡುತ್ತದೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥರೂ ಆಗಿರುವ ಮಮತಾ ಹೇಳಿದರು.
‘‘ಅಧ್ಯಾದೇಶವನ್ನು ರಾಜ್ಯಸಭೆಯಲ್ಲಿ ವಿರೋಧಿಸಲು ನಮ್ಮ ಪಕ್ಷ ನಿರ್ಧರಿಸಿದೆ’’ ಎಂದರು.
ದಿಲ್ಲಿ ಸರಕಾರದ ಉದ್ಯೋಗಿಗಳು ದಿಲ್ಲಿ ಸರಕಾರದ ವ್ಯಾಪ್ತಿಗೆ ಬರುತ್ತಾರೆ ಎಂದು ಹೇಳಿದ ಮಮತಾ, ಇಂಥ ಅಧ್ಯಾದೇಶಗಳು ದೇಶದ ಪಾಲಿಗೆ ಅಪಾಯಕಾರಿ ಎಂದು ಹೇಳಿದರು. ‘‘ಅವರು ದೇಶದ ಹೆಸರನ್ನು ಬದಲಾಯಿಸಿ, ಅದಕ್ಕೆ ತಮ್ಮದೇ ಪಕ್ಷದ ಹೆಸರನ್ನು ಇಡುತ್ತಾರೆ ಎಂಬ ಭಯ ನಮಗಿದೆ. ಅವರು ಸಂವಿಧಾನವನ್ನೇ ಬದಲಿಸುತ್ತಾರೆ ಎಂಬ ಭಯ ನಮಗಿದೆ’’ ಎಂದು ಅವರು ನುಡಿದರು.
8 ವರ್ಷಗಳ ಸುಪ್ರೀಂ ಕೋರ್ಟ್ ಆದೇಶ 8 ದಿನಗಳಲ್ಲಿ ಬುಡಮೇಲು: ಕೇಜ್ರಿವಾಲ್
ಸುಪ್ರೀಂ ಕೋರ್ಟ್ ಎಂಟು ಸುದೀರ್ಘ ವರ್ಷಗಳ ಕಾಲ ವಿಚಾರಣೆ ನಡೆಸಿ, ರಾಷ್ಟ್ರ ರಾಜಧಾನಿಯಲ್ಲಿ ದಿಲ್ಲಿ ಸರಕಾರವು ಕಾನೂನುಗಳನ್ನು ಮಾಡಬಹುದು ಮತ್ತು ನಾಗರಿಕ ಸೇವೆಗಳ ಮೇಲೆ ನಿಯಂತ್ರಣವನ್ನು ಹೊಂದಬಹುದು ಎಂದು ತೀರ್ಪು ನೀಡಿದೆ. ಆದರೆ, ಬಿಜೆಪಿ ಸರಕಾರವು ಅದನ್ನು 8 ದಿನಗಳಲ್ಲಿ ಬುಡಮೇಲು ಮಾಡಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್ ಹೇಳಿದರು.
‘ಅವರು ಪ್ರಜಾಪ್ರಭುತ್ವವನ್ನು ಅಣಕಿಸುತ್ತಿದ್ದಾರೆ. ಬಿಜೆಪಿಯು ಪ್ರತಿಪಕ್ಷಗಳ ಚುನಾಯಿತ ಸರಕಾರಗಳನ್ನು ಮೂರು ರೀತಿಗಳಲ್ಲಿ ಬುಡಮೇಲುಗೊಳಿಸಲು ಪ್ರಯತ್ನಿಸುತ್ತದೆ- ಶಾಸಕರನ್ನು ಖರೀದಿಸುವುದು, ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸುವುದು ಮತ್ತು ಮೂರನೆಯದಾಗಿ ರಾಜ್ಯಪಾಲರುಗಳು ಮತ್ತು ಅಧ್ಯಾದೇಶಗಳ ಮೂಲಕ’’ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್ ನುಡಿದರು.







