ನಟಿ ವೈಭವಿ ಉಪಾಧ್ಯಾಯ ಕಾರು ಅಪಘಾತದಲ್ಲಿ ಮೃತ್ಯು

ಮುಂಬೈ: ಜನಪ್ರಿಯ 'ಸಾರಾಭಾಯಿ vs ಸಾರಾಭಾಯಿ' ಕಿರುತೆರೆ ಶೋನ ತಮ್ಮ ಪಾತ್ರದಿಂದ ಖ್ಯಾತರಾಗಿದ್ದ ನಟಿ ವೈಭವಿ ಉಪಾಧ್ಯಾಯ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ndtv.com ವರದಿ ಮಾಡಿದೆ.
ಈ ದುರದೃಷ್ಟಕರ ಸುದ್ದಿಯನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿರುವ ನಿರ್ಮಾಪಕ ಜೆ.ಡಿ.ಮಜೇತಿಯಾ, ಉತ್ತರ ಭಾರತದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ.
"ಜೀವನ ಊಹಿಸಲಸಾಧ್ಯ. ಓರ್ವ ಅತ್ಯುತ್ತಮ ನಟಿ ಹಾಗೂ ಆತ್ಮೀಯ ಗೆಳತಿ, 'ಸಾರಾಭಾಯಿ vs ಸಾರಾಭಾಯಿ' ಶೋನಲ್ಲಿ 'ಜಾಸ್ಮಿನ್' ಎಂದೇ ಜನಪ್ರಿಯರಾಗಿದ್ದ ವೈಭವಿ ಉಪಾಧ್ಯಾಯ ನಿಧನರಾಗಿದ್ದಾರೆ. ಉತ್ತರ ಭಾರತದಲ್ಲಿ ಅವರು ಅಪಘಾತಕ್ಕೀಡಾಗಿದ್ದಾರೆ. ವೈಭವಿಗೆ ಅಂತಿಮ ನಮನಗಳು" ಎಂದು ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ವೈಭವಿ ಸಾವಿನ ಕುರಿತು ಮತ್ತಷ್ಟು ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.
ಕಿರುತೆರೆಯ 'ಸಾರಾಭಾಯಿ vs ಸಾರಾಭಾಯಿ' ಶೋ ಮಾತ್ರವಲ್ಲದೆ, ವೈಭವಿ ಅವರು ದೀಪಿಕಾ ಪಡುಕೋಣೆ ನಟಿಸಿದ್ದ 2020ರಲ್ಲಿ ಬಿಡುಗಡೆಯಾಗಿದ್ದ 'ಚಪಾಕ್' ಹಾಗೂ 2023ರಲ್ಲಿ ಬಿಡುಗಡೆಯಾಗಿದ್ದ 'ತಿಮಿರ್' ಚಿತ್ರಗಳಲ್ಲೂ ನಟಿಸಿದ್ದರು.





