ಸಂಸತ್ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಬಹಿಷ್ಕರಿಸಿ 19 ವಿರೋಧ ಪಕ್ಷಗಳಿಂದ ಜಂಟಿ ಹೇಳಿಕೆ
‘ಪ್ರಧಾನಿಗಳಿಗೆ ಪ್ರಜಾಪ್ರಭುತ್ವ ವಿರೋಧಿ ಕೃತ್ಯಗಳು ಹೊಸದಲ್ಲ’ ಎಂದು ವಾಗ್ದಾಳಿ

ಹೊಸದಿಲ್ಲಿ: ಹೊಸ ಸಂಸತ್ ಭವನಕ್ಕೆ ಸಂಬಂಧಿಸಿ ಗದ್ದಲ ಉಂಟಾಗಿರುವ ನಡುವೆಯೇ AAP, TMC, ಹಾಗೂ ಶಿವಸೇನೆ UBT ಸೇರಿದಂತೆ 19 ವಿರೋಧ ಪಕ್ಷಗಳು ಸಂಸತ್ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಉದ್ಘಾಟನೆಯನ್ನು ಬಹಿಷ್ಕರಿಸಿ ಬುಧವಾರ ಜಂಟಿ ಹೇಳಿಕೆಯನ್ನು ನೀಡಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂಸತ್ ಭವನ ಉದ್ಘಾಟನೆ ಮಾಡಲಿದ್ದಾರೆ ಎಂಬ ವಿಚಾರವನ್ನು ವಿರೋಧ ಪಕ್ಷಗಳು ಸರ್ವಾನುಮತದಿಂದ ಆಕ್ಷೇಪಿಸಿದ್ದು, ಈ ಗೌರವವು ಪ್ರಧಾನಿ ಬದಲಿಗೆ ಭಾರತದ ರಾಷ್ಟ್ರಪತಿಗೆ ಸೇರಿದೆ ಎಂದು ಹೇಳಿವೆ.
"ಹೊಸ ಸಂಸತ್ ಕಟ್ಟಡದ ಉದ್ಘಾಟನೆಯು ಒಂದು ಮಹತ್ವದ ಸಂದರ್ಭವಾಗಿದೆ... ನಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಈ ಸಂದರ್ಭವನ್ನು ಗುರುತಿಸಲು ನಾವು ಮುಕ್ತರಾಗಿದ್ದೇವೆ. ಆದಾಗ್ಯೂ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಂಪೂರ್ಣವಾಗಿ ಬದಿಗೊತ್ತಿ ಹೊಸ ಸಂಸತ್ತಿನ ಕಟ್ಟಡವನ್ನು ಸ್ವತಃ ಉದ್ಘಾಟಿಸುವ ಪ್ರಧಾನಿ ಮೋದಿಯವರ ನಿರ್ಧಾರವು ಘೋರ ಅವಮಾನ ಮಾತ್ರವಲ್ಲ, ನಮ್ಮ ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿಯಾಗಿದೆ, ಇದು ಸೂಕ್ತ ಪ್ರತಿಕ್ರಿಯೆಯನ್ನು ಬಯಸುತ್ತದೆ ”ಎಂದು ವಿಪಕ್ಷಗಳ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.





