ಹಿಂದಿನ ಬಿಜೆಪಿ ಸರಕಾರದ ವೇಳೆ ಗಂಗಾ ಕಲ್ಯಾಣ ಯೋಜನೆಯಲ್ಲಿ ಅಕ್ರಮ ಆರೋಪ: ಎಫ್ಐಆರ್ ದಾಖಲು
ಸಿಐಡಿ ತನಿಖೆ ಸಾಧ್ಯತೆ

ಬೆಂಗಳೂರು, ಮೇ 23: ಈ ಹಿಂದಿನ ಬಿಜೆಪಿ ಸರಕಾರದ ಸಂದರ್ಭದಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ನಡೆದಿದ್ದ ಎನ್ನಲಾದ ಪ್ರಕರಣ ಸಂಬಂಧ ಇಲ್ಲಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲು ಮಾಡಲಾಗಿದೆ.
ಗಂಗಾ ಕಲ್ಯಾಣ ಯೋಜನೆಯಲ್ಲಿ ಕೋಟ್ಯಂತರ ರೂ.ವಂಚನೆ ಆಗಿದೆ ಎಂದು ಆರೋಪಿಸಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ವಿಧಾನಸೌಧ ಠಾಣೆಗೆ ದೂರು ನೀಡಲಾಗಿದ್ದು, ಪ್ರಮುಖವಾಗಿ ಟೆಂಡರ್ ನಿಯಮಗಳನ್ನು ಗಾಳಿಗೆ ತೂರಿ ಹಣ ಕಬಳಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ರಾಜ್ಯ ಸರಕಾರದ ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿಗಳು ಕೃಷಿ ಭೂಮಿಯಲ್ಲಿ ತಜ್ಞರ ಮೂಲಕ ಗುರುತಿಸಲ್ಪಟ್ಟ ಜಲಬಿಂದು ವ್ಯಾಪ್ತಿಯೊಳಗೆ ಕೊಳವೆಬಾವಿ ಕೊರೆಯಿಸಿ, ನಂತರ ನೀರು ಸಂಗ್ರಹಿಸಲು ಟ್ಯಾಂಕ್‍ನ್ನು ನಿರ್ಮಿಸಿಕೊಟ್ಟು, ಅದಕ್ಕೆ ಅಳವಡಿಸಿದ ಪೈಪ್ ಮೂಲಕ ಕೃಷಿ ಭೂಮಿಗೆ ನೀರನ್ನು ಒದಗಿಸುವುದು ಯೋಜನೆಯ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ನೀಡಿ ಕೋಟ್ಯಂತರ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಈ ಹಿಂದೆ 2021ರಲ್ಲಿ ಗಂಗಾಕಲ್ಯಾಣ ಯೋಜನೆ ಅಕ್ರಮ ತಡೆಯಲು ರಚನೆಯಾಗಿದ್ದ ಸದನ ಸಮಿತಿ ತನ್ನ ಮಧ್ಯಂತರ ವರದಿಯನ್ನೂ ಸಲ್ಲಿಸಿತ್ತು. ಇದರ ಬೆನ್ನಲ್ಲೇ ಇದೀಗ ಮೊಕದ್ದಮೆ ದಾಖಲಾಗಿದ್ದು, ರಾಜ್ಯ ಸರಕಾರ ಸಿಐಡಿ ತನಿಖೆಗೆ ಒಪ್ಪಿಸುವ ಸಾಧ್ಯತೆಯೂ ಇದೆ.