ಶಿರ್ವ: ರೈಲ್ವೆ ಟಿಕೆಟ್ ವಿಚಾರದಲ್ಲಿ ಟ್ರಾವೆಲ್ ಏಜೆನ್ಸಿಗೆ ಹಲ್ಲೆ, ಕಚೇರಿಗೆ ಹಾನಿ; ಪ್ರಕರಣ ದಾಖಲು

ಶಿರ್ವ: ರೈಲ್ವೆ ಟಿಕೆಟ್ ವಿಚಾರದಲ್ಲಿ ಟ್ರಾವೆಲ್ ಏಜೆನ್ಸಿಯೊಬ್ಬರಿಗೆ ಹಲ್ಲೆ ನಡೆಸಿ, ಕಚೇರಿಯ ಸೊತ್ತುಗಳನ್ನು ಹಾನಿಗೈದಿರುವ ಘಟನೆ ಮೇ 23ರಂದು ಶಿರ್ವದಲ್ಲಿ ನಡೆದಿದೆ.
ಹಲ್ಲೆಗೆ ಒಳಗಾದವರನ್ನು ಶಿರ್ವ ಪೇಟೆಯ ನಿಸರ್ಗ ಸರ್ವಿಸಸ್ ಟ್ರಾವೆಲ್ ಏಜೆನ್ಸಿ, ಕಳತ್ತೂರು ಪಯ್ಯಾರು ನಿವಾಸಿ ಗಣೇಶ್ (50) ಎಂದು ಗುರುತಿಸ ಲಾಗಿದೆ. ಇವರಲ್ಲಿ ಅಭಿಷೇಕ್ ಶೆಟ್ಟಿ ಹಾಗೂ ಸಂತೋಷ್ ಶೆಟ್ಟಿ ಮೇ 21ರಂದು ಮೇ 22ರಂದು ಮುಂಬೈಗೆ ಹೋಗಲು ರೈಲ್ವೆ ಟಿಕೆಟ್ ಬುಕ್ ಮಾಡಿದ್ದರು. ಟಿಕೆಟ್ ಕರ್ಫಮ್ ಆಗದ ಹಿನ್ನೆಲೆಯಲ್ಲಿ ಟಿಕೆಟ್ ಕ್ಯಾನ್ಸಲ್ ಮಾಡಲು ಅಭಿಷೇಕ್ ತಿಳಿಸಿದ್ದರು. ಟಿಕೆಟಿನ ಸ್ವಲ್ಪ ಹಣವನ್ನು ನೀಡಿ, ಉಳಿದ ಹಣವನ್ನು ಎರಡು ದಿನದಲ್ಲಿ ಗೂಗಲ್ ಪೇ ಮಾಡುವುದಾಗಿ ಗಣೇಶ್ ತಿಳಿಸಿದ್ದರು.
ಇದೇ ವಿಚಾರದಲ್ಲಿ ಕಚೇರಿಗೆ ಬಂದ ಅಭಿಷೇಕ್ ಶೆಟ್ಟಿ ಮತ್ತು ಸಂತೋಷ್ ಶೆಟ್ಟಿ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಗಣೇಶ್ ಅವರಿಗೆ ಹೊಡೆದು ಜೀವ ಬೆದರಿಕೆ ಹಾಕಿದ್ದಾರೆ. ಕಚೇರಿಯಲ್ಲಿದ್ದ ಸೊತ್ತುಗಳನ್ನು ಹಾನಿ ಮಾಡಿ 2,00,000 ರೂ. ನಷ್ಟವುಂಟು ಮಾಡಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.