ಸಿದ್ದರಾಮಯ್ಯ ವಿರುದ್ಧ ಪ್ರಚೋದನಕಾರಿ ಹೇಳಿಕೆ: ಮಾಜಿ ಸಚಿವ ಅಶ್ವತ್ಥನಾರಾಯಣ ಮೇಲೆ FIR ದಾಖಲು

ಮೈಸೂರು,ಮೇ 24: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಮಾಜಿ ಸಚಿವ ಹಾಗೂ ಶಾಸಕ ಡಾ.ಅಶ್ವತ್ಥನಾರಾಯಣ ವಿರುದ್ಧ ಮೈಸೂರು ನಗರದ ದೇವರಾಜ ಪೊಲೀಸ್ ಠಾಣೆಯಲ್ಲಿ ಬುಧವಾರ ಐ.ಪಿ.ಸಿ. ಸೆಕ್ಷನ್ 506, 153 ರಡಿ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ಬುಧವಾರ ಸಂಜೆ ಮೈಸೂರು ಜಿಲ್ಲಾ ಕಾಂಗ್ರೆಸ್ ನಿಯೋಗದೊಂದಿಗೆ ದೇವರಾಜ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿ ಮಾಜಿ ಸಚಿವ ಡಾ.ಅಶ್ವತ್ಥನಾರಾಯಣ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಲಿಖಿತ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದಿನಾಂಕ 15.02.2023 ರಂದು ಮಾಜಿ ಸಚಿವ ಡಾ.ಅಶ್ವತ್ಥನಾರಾಯಣ ಅವರು ಮಂಡ್ಯ ಜಿಲ್ಲೆಯ ಸಾತನೂರಿನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಟಿಪ್ಪು ಸುಲ್ತಾನನ್ನು ಮಂಡ್ಯದ ಉರಿಗೌಡ ಮತ್ತು ನಂಜೇಗೌಡರು ಹೇಗೆ ಕೊಂದು ಹಾಕಿದರೊ ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ ಎಂದು ಬಹಿರಂಗವಾಗಿ ಪ್ರಚೋದನಕಾರಿಯಾಗಿ ಹೇಳಿಕೆ ನೀಡಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿರುತ್ತಾರೆ. ಈ ಬಗ್ಗೆ 17.02.2023ರಂದು ಕಾಂಗ್ರೆಸ್ ಮುಖಂಡರುಗಳು ದೇವರಾಜ ಪೊಲೀಸ್ ಠಾಣೆಗೆ ಬಂದು ದೂರು ಸಲ್ಲಿಸಿದ್ದರೂ ಯಾವುದೇ ಕ್ರಮವಹಿಸಿರುವುದಿಲ್ಲ.
ಈ ಹಿಂದೆ ಸಿದ್ದರಾಮಯ್ಯ ರವರು ಕೊಡಗು ಜಿಲ್ಲೆಗೆ ಮಳೆ ಹಾನಿ ವೀಕ್ಷಣೆಗೆ ಹೋಗಿದ್ದಾಗ ಒಂದು ವರ್ಗ ಕೊಲೆ ಮಾಡಲು ಯತ್ನಿಸಿದ್ದರು. ಈ ವಿಚಾರವಾಗಿ ಮಡಿಕೇರಿ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಇವರನ್ನು ಮತ್ತೊಮ್ಮೆ ಸಮಾಜದ್ರೋಹಿಗಳು ಕೊಲೆ ಮಾಡಲು ಯತ್ನಿಸುವ ಸಾಧ್ಯತೆಗಳಿವೆ.
ಮಾಜಿ ಸಚಿವ ಡಾ.ಅಶ್ವತ್ಥನಾರಾಯಣ ಅವರು ನೀಡಿರುವ ಹೇಳಿಕೆಯು ರಾಜ್ಯಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಚಾರ ಪಡೆದು ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿದ್ಧರಾಮಯ್ಯನವರ ಸ್ಥಾನಕ್ಕೆ ಕುಂದು ಉಂಟಾಗಿದ್ದು ರಾಜ್ಯದಲ್ಲಿ ಅಶಾಂತಿ ಉಂಟಾಗಿ ಕೋಮು ಸೌಹಾರ್ದತೆ ಹಾಳಾಗುತ್ತರುವುದು ಕಂಡು ಬಂದಿರುತ್ತದೆ.
ಈ ಎಲ್ಲಾ ಕಾರಣಗಳಿಂದ ಸಾರ್ವಜನಿಕವಾಗಿ ಮಾಜಿ ಸಚಿವ ಡಾ.ಅಶ್ವತ್ಥನಾರಾಯಣ ಅವರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕೊಲೆ ಮಾಡಲು ಸುಫಾರಿ ನೀಡುವ ಸಂಶಯ ಇರುತ್ತದೆ. ಆದ್ದರಿಂದ ಮಾಜಿ ಸಚಿವ ಡಾ.ಅಶ್ವತ್ಥ ನಾರಾಯಣ ಅವರ ಇಂತಹ ಕೊಲೆ ಬೆದರಿಕೆ ಕರೆಯನ್ನು ಗಂಭೀರವಾಗಿ ಪರಿಗಣಿಸಿ ಎಫ್.ಐ.ಆರ್ ದಾಖಲಿಸಿ ಇವರನ್ನು ಕೂಡಲೇ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ದೂರಿನಲ್ಲಿ ಕೋರಲಾಗಿದೆ.
ಈ ಸಂಬಂಧ ದೇವರಾಜ ಠಾಣೆ ಪೊಲೀಸರು ಮಾಜಿ ಸಚಿವ ಡಾ.ಅಶ್ವತ್ಥ ನಾರಾಯಣ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಮೈಸೂರು ಜಿಲ್ಲಾ ಕಾಂಗ್ರೆಸ್ ನಿಯೋಗದಲ್ಲಿ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ.ಜೆ.ವಿಜಯ್ ಕುಮಾರ್, ಕೆಪಿಸಿಸಿ ವಕ್ತರ ಎಂ. ಲಕ್ಷ್ಮಣ್ , ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಡಿಸಿಸಿ ಕಾನೂನು ವಿಭಾಗದ ಅಧ್ಯಕ್ಷ ವಕೀಲ ತಿಮ್ಮಯ್ಯ, ಜಿಲ್ಲಾ ಕಾಂಗ್ರೆಸ್ ಸಮಿತಿಯ ವಿವಿಧ ಪದಾಧಿಕಾರಿ ವಕೀಲರಾದ ಶಿವಪ್ರಸಾದ್ ಎಂ. ಸುರೇಶ್ ಪಾಳ್ಯ, ಪ್ರೇಮ್, ಲಕ್ಕೇಗೌಡ್ರು, ಚರಣ್ ರಾಜ್, ಮನೋನ್ಮಣಿ, ಮೈತ್ರಿ, ಚಂದ್ರು, ದೊಡ್ಡದಳ್ಳಿ ಮಾದೇವ , ರಾಹುಲ್, ಮನೋಜ್ ಕುಮಾರ್ ಇತರರು ಉಪಸ್ಥಿತರಿದ್ದರು.








