ಐಟಿಐ ಕಾರ್ಖಾನೆಯಿಂದ 80 ಕಾರ್ಮಿಕರ ವಜಾ ಪ್ರಕರಣ: ಒಪ್ಪಂದಕ್ಕೆ ಬದ್ಧವಾಗಿರುವಂತೆ ಆಡಳಿತ ಮಂಡಳಿಗೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು, ಮೇ 24: ಐಟಿಐ ಕಾರ್ಖಾನೆಯಿಂದ ಕೆಲಸದಿಂದ ವಜಾಗೊಂಡಿದ್ದ 80 ಕಾರ್ಮಿಕರನ್ನು ಮರುನೇಮಕ ಮಾಡಿಕೊಳ್ಳುವ ವಿಚಾರದಲ್ಲಿ, ಐಟಿಐ ಲಿಮಿಟೆಡ್ ಆಡಳಿತ ಮಂಡಳಿಯು ಒಪ್ಪಂದಕ್ಕೆ ಬದ್ಧವಾಗಿರಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ ಎಂದು ಎಐಟಿಸಿಸಿಟಿಯು ತಿಳಿಸಿದೆ.
ಈ ಕುರಿತು ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್(ಎಐಟಿಸಿಸಿಟಿಯು) ಪ್ರಕಟನೆಯನ್ನು ಹೊರಡಿಸಿದ್ದು, 2021ರ ಡಿಸೆಂಬರ್ 1ರಂದು ಐಟಿಐನ ಆಡಳಿತ ಮಂಡಳಿಯು 80 ಮಂದಿ ಕಾರ್ಮಿಕರನ್ನು ವಜಾ ಮಾಡಿತ್ತು. ಅಂದಿನಿಂದ ವಜಾಗೊಂಡ ಕಾರ್ಮಿಕರು ಕಾರ್ಖಾನೆಯ ಮುಂಬಾಗ ಪ್ರತಿಭಟನೆಯನ್ನು ನಡೆಸುತ್ತಿದ್ದರು.
ಕಾರ್ಮಿಕರನ್ನು ಹಂತಹಂತವಾಗಿ ನೇಮಕ ಮಾಡಿಕೊಳ್ಳುವಂತೆ ಆಡಳಿತ ಮಂಡಳಿಯು ಕಾರ್ಮಿಕರೊಂದಿಗೆ ಒಪ್ಪಂದವನ್ನು ಏರ್ಪಡಿಸಿಕೊಂಡಿತ್ತು. ಆದರೆ ಮಂಡಳಿಯು ಈ ಒಪ್ಪಂದಕ್ಕೆ ಬದ್ದವಾಗಿರಲಿಲ್ಲ. ಹಾಗಾಗಿ ಕಾರ್ಮಿಕರನ್ನು ಪುನಾಃ ನೇಮಿಸಿಕೊಳ್ಳುವಂತೆ ಸಂಘಟನೆಯು ಹೈಕೋರ್ಟ್‍ಗೆ ರಿಟ್ ಅರ್ಜಿಯನ್ನು ಸಲ್ಲಿಸಿತ್ತು. ಅರ್ಜಿಯನ್ನು ಪರಿಶೀಲಿಸಿ, ಒಪ್ಪಂದಕ್ಕೆ ಬದ್ದವಾಗಿರುವಂತೆ ಕೋರ್ಟ್ ನಿರ್ದೇಶಿಸಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.