ಮೇ 27: ಕರಂಬಳ್ಳಿಯಲ್ಲಿ ಕೃಷಿ ಸಮ್ಮೇಳನ, ವಸ್ತು ಪ್ರದರ್ಶನ
ಉಡುಪಿ, ಮೇ 24: ಜಿಲ್ಲಾ ಕೃಷಿಕ ಸಂಘ ಕರಂಬಳ್ಳಿ ವಲಯ ಸಮಿತಿ, ಜಿಲ್ಲಾ ಸಮಿತಿ, ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ಮತ್ತು ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನ ಆಡಳಿತ ಮಂಡಳಿ ಆಶ್ರಯದಲ್ಲಿ ಮೇ 27ರ ಶನಿವಾರ ಅಪರಾಹ್ನ 3:00ರಿಂದ ಸಂಜೆ 7:00ಗಂಟೆಯವರೆಗೆ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನ ವಠಾರದಲ್ಲಿ ಕೃಷಿ ಸಮ್ಮೇಳನ ಮತ್ತು ಕೃಷಿ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಕೃಷಿಕ ಸಂಘ ಕರಂಬಳ್ಳಿ ವಲಯ ಸಮಿತಿಯನ್ನು ಹಿರಿಯ ಕೃಷಿಕರಾದ ಸರಸ್ವತಿ ಬಾರಿತ್ತಾಯ ಉದ್ಘಾಟಿಸಲಿದ್ದಾರೆ. ಕೃಷಿ ವಸ್ತು ಪ್ರದರ್ಶನವನ್ನು ಮಾಜಿ ಶಾಸಕ ಕೆ. ರಘಪತಿ ಭಟ್ ಉದ್ಘಾಟಿಸಲಿದ್ದಾರೆ. ಕರಂಬಳ್ಳಿ ಬ್ರಾಹ್ಮಣ ಸಮಿತಿ ಅಧ್ಯಕ್ಷ ಕೃಷ್ಣರಾಜ ಭಟ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ ಶಾಸಕ ಯಶಪಾಲ ಎ. ಸುವರ್ಣ ಮುಖ್ಯ ಅತಿಥಿಗಳಾಗಿ ಭಾಗವಹಿ ಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರು, ವಿಷಯ ತಜ್ಞರು ಮತ್ತು ಕೃಷಿ ವಿಜ್ಞಾನಿಗಳಿಂದ ಕೃಷಿ ವಿಚಾರ ಗೋಷ್ಠಿಗಳು ನಡೆಯಲಿವೆ. ಲಾಭದಾಯಕ ವೈಜ್ಞಾನಿಕ ಮಲ್ಲಿಗೆ ಕೃಷಿಯ ಬಗ್ಗೆ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ತಾರಸಿ ಮತ್ತು ಕೈತೋಟ ನಿರ್ವಹಣೆ ಕುರಿತು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಡಾ. ಚೈತನ್ಯ ಮಾಹಿತಿ ನೀಡಲಿದ್ದಾರೆ. ಸಮಗ್ರ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಬಗ್ಗೆ ಸಾಧನ ಶೀಲ ಕೃಷಿಕ ಶ್ರೀನಿವಾಸ ಭಟ್ ಕುದಿ ವಿವರಿಸಲಿದ್ದಾರೆ.
ಲಾಭದಾಯಕ ಭತ್ತದ ಬೆಳೆ ಕುರಿತು ಕೃಷಿ ವಿಜ್ಞಾನ ಕೇಂದ್ರದ ಡಾ. ಧನಂಜಯ, ಹೈನುಗಾರಿಕೆಯ ಸವಾಲುಗಳು ಮತ್ತು ಪರಿಹಾರ ಕುರಿತು ಪಶು ವೈದ್ಯಾಧಿಕಾರಿ ಡಾ. ಪ್ರಶಾಂತ್ ಶೆಟ್ಟಿ, ಕೃಷಿ ಇಲಾಖೆಯ ಸವಲತ್ತುಗಳ ಕುರಿತು ಕೃಷಿ ಇಲಾಖೆಯ ಮೋಹನ್ ರಾಜ್ ಮತ್ತು ತೋಟಗಾರಿಕಾ ಇಲಾಖೆಯ ಸವಲತ್ತುಗಳ ಕುರಿತು ತೋಟಗಾರಿಕಾ ಇಲಾಖೆಯ ಗುರುಪ್ರಸಾದ್ ಮಾಹಿತಿ ನೀಡಲಿದ್ದಾರೆ.
ಕೃಷಿ ಸಮ್ಮೇಳನದಲ್ಲಿ ಕೃಷಿ ವಸ್ತು ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ, ರಿಯಾಯಿತಿ ದರದಲ್ಲಿ ಬಾಳೆಗಿಡಗಳನ್ನು ನೀಡಲಾಗುವುದು. ವಲಯದ ಏಳು ಮಂದಿ ಪ್ರಗತಿ ಪರ ಕೃಷಿಕರು ಮತು ಕೃಷಿಕ ಮಹಿಳೆ ಯರನ್ನು ಸನ್ಮಾನಿಸಲಾಗುವುದು. ಕಡಿಮೆ ವೆಚ್ಚ ಮತ್ತು ಕಡಿಮೆ ಶ್ರಮದಲ್ಲಿ ಲಾಭದಾಯಕ ಕೃಷಿ ಮಾಡುವ ಕುರಿತು ಮಾಹಿತಿ -ಮಾರ್ಗದರ್ಶನ ನೀಡಲಾಗುವುದು. ಆಸಕ್ತ ಕೃಷಿಕರು ಇದರಲ್ಲಿ ಭಾಗವಹಿಸುವಂತೆ ಸಂಘಟ ಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.