ಸಾಲಿಗ್ರಾಮ: ವಿದ್ಯಾಪೋಷಕ್‌ನ ಒಂದು ದಿನದ ಶೈಕ್ಷಣಿಕ ಶಿಬಿರ
ಸಾಲಿಗ್ರಾಮ: ಯಕ್ಷಗಾನ ಕಲಾರಂಗದ ಅಂಗ ಸಂಸ್ಥೆ ವಿದ್ಯಾ ಪೋಷಕ್‌ನ ದ್ವಿತೀಯ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗೆ ಒಂದು ದಿನದ ಶೈಕ್ಷಣಿಕ ಶಿಬಿರ ಸಾಲಿಗ್ರಾಮ ದೇವಳದ ಜ್ಞಾನಮಂದಿರದಲ್ಲಿ ಮಂಗಳವಾರ ಜರಗಿತು.
ಶಿಬಿರದ ನಿರ್ದೇಶಕರಾಗಿ ಹುಬ್ಬಳ್ಳಿಯ ಮೈಲೈಫ್ ಮುಖ್ಯಸ್ಥ ಪ್ರವೀಣ್ ಗುಡಿ ಅವರು ವಿದ್ಯಾರ್ಥಿಗಳಿಗೆ ಮಾರ್ಗ ದರ್ಶನ ನೀಡಿದರು. ಈಗಾಗಲೇ ಸಿಇಟಿ ಮತ್ತು ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಡಾ.ಶ್ರುತಕೀರ್ತಿ ಅವರು ಮುಂದಿನ ನಡೆಯ ಬಗ್ಗೆ ಮಾರ್ಗದರ್ಶನ ನೀಡಿದರು. ಸಿಎ ಮಾಡಲು ಸಂಕಲ್ಪಿಸಿದ ವಿದ್ಯಾರ್ಥಿಗಳಿಗೆ ಸಿಎ ಪ್ರದೀಪ ಜೋಗಿ ಅವರು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಸಾಲಿಗ್ರಾಮ ಶ್ರೀಗುರುನರಸಿಂಹ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಆರ್.ಕಾರಂತರು ಶಿಬಿರವನ್ನು ಉದ್ಘಾಟಿಸಿದರು. ಅಲ್ಲದೇ ಸಂಸ್ಥೆಯ ಪದಾಧಿಕಾರಿಗಳನ್ನು ಗೌರವಿಸಿದರು. ಯಕ್ಷಗಾನ ಕಲಾರಂಗವು ವಿವಿಧ ರೀತಿಗಳಲ್ಲಿ ನೀಡುತ್ತಿರುವ ಸೇವೆಯನ್ನು ಅವರು ಪ್ರಶಂಸಿಸಿದರು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಉಪಾಧ್ಯಕ್ಷರಾದ ಎಸ್.ವಿ.ಭಟ್, ಪಿ.ಕಿಶನ್ ಹೆಗ್ಡೆ, ಜೊತೆ ಕಾರ್ಯದರ್ಶಿ ನಾರಾಯಣ ಎಂ.ಹೆಗಡೆ, ರಮೇಶ್‌ರಾವ್, ಗಣೇಶ್ ಬ್ರಹ್ಮಾವರ, ನರಸಿಂಹ ತುಂಗ, ಕಿಶನ್ ರಾವ್ ಉಪಸ್ಥಿತರಿದ್ದರು.
ಆರಂಭದಲ್ಲಿ ದೇವಳದ ವ್ಯವಸ್ಥಾಪಕರಾದ ಎಚ್.ನಾಗರಾಜ್ ಹಂದೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿಬಿರದಲ್ಲಿ 162 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಮುಂದಿನ ಶೈಕ್ಷಣಿಕ ಚಟುವಟಿಕೆಗೆ ಉಪಯುಕ್ತ ಮಾಹಿತಿ ಗಳನ್ನು ಪಡೆದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಮುಖ್ಯ ಸೂಚನೆಗಳನ್ನು ನೀಡಿದರು.