ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ಓರ್ವ ಸಾವು, ಇಬ್ಬರಿಗೆ ಗಾಯ

ಇಂಫಾಲ, ಮೇ 24: ಮಣಿಪುರದಲ್ಲಿ ಬುಧವಾರ ನಡೆದ ಪ್ರತ್ಯೇಕ ಹಿಂಸಾಚಾರದ ಘಟನೆಗಳಲ್ಲಿ ಓರ್ವ ಮೃತಪಟ್ಟಿದ್ದಾರೆ ಹಾಗೂ ಇತರ ಇಬ್ಬರು ಗಾಯಗೊಂಡಿದ್ದಾರೆ ಎಂದು ರಾಜ್ಯ ಸರಕಾರ ತಿಳಿಸಿದೆ. ಮೃತಪಟ್ಟ ವ್ಯಕ್ತಿಯನ್ನು 30 ವರ್ಷದ ತೊಯಿಜಾಮ್ ಚಂದ್ರಮಣಿ ಎಂದು ಗುರುತಿಸಲಾಗಿದೆ.ಇವರು ಚುರಾಚಾಂದ್‌ಪುರ ಜಿಲ್ಲೆಯವರು. ಗುಂಡಿನಿಂದ ಗಾಯಗೊಂಡ ಇವರನ್ನು ಆಸ್ಪತ್ರೆ ಕೊಂಡೊಯ್ಯುತ್ತಿದ್ದಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ರಾಜ್ಯ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಅವರು ತಿಳಿಸಿದ್ದಾರೆ.
ಬಿಷ್ಣುಪುರ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಶಂಕಿತ ಉಗ್ರರ ಗುಂಪೊಂದು ಮೂರು ಮನೆಗಳಿಗೆ ಬೆಂಕಿ ಹಚ್ಚಿತು. ಇದಕ್ಕೆ ಪ್ರತೀಕಾರವಾಗಿ ಅನಾಮಿಕ ವ್ಯಕ್ತಿಗಳು ಪೌಬಾಕ್ಚಾವೊ ಹಾಗೂ ಸಮೀಪದ ಪ್ರದೇಶಗಳಲ್ಲಿ ಇನ್ನು ಕೆಲವು ಮನೆಗಳಿಗೆ ಬೆಂಕಿ ಹಚ್ಚಿದರು ಎಂದು ಅವರು ಹೇಳಿದ್ದಾರೆ. ಅನಂತರ ಹಲವು ನಿವಾಸಿಗಳು ಪ್ರತಿಭಟನೆ ನಡೆಸಲು ಹಾಗೂ ದಾಳಿಕೋರರನ್ನು ಅಟ್ಟಿಸಿಕೊಂಡು ಹೋಗಲು ಆರಂಭಿಸಿದರು.
ಭದ್ರತಾ ಪಡೆಗಳು ಪರಿಸ್ಥಿತಿಯನ್ನು ಹತೋಟಿಗೆ ತಂದಿವೆ. ಬೆಟ್ಟ ಪ್ರದೇಶದಿಂದ ಬುಧವಾರ ಬೆಳಗ್ಗೆ ಸುಮಾರು 9.30ಕ್ಕೆ ಹಾರಿಸಲಾದ ಗುಂಡಿನಿಂದಾಗಿ ಚಂದ್ರಮಣಿ ಸಾವನ್ನಪ್ಪಿದ್ದಾರೆ ಹಾಗೂ ಇನ್ನೋರ್ವ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈಗ ಈ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಆದರೆ, ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





