ಹೊಸ ಪಾಸ್‌ಪೋರ್ಟ್‌ಗೆ ರಾಹುಲ್ ಗಾಂಧಿ ಅರ್ಜಿ: ಪ್ರತಿಕ್ರಿಯೆ ಸಲ್ಲಿಸಲು ಸುಬ್ರಹ್ಮಣ್ಯ ಸ್ವಾಮಿಗೆ ನ್ಯಾಯಾಲಯ ಸೂಚನೆ

ಹೊಸದಿಲ್ಲಿ: ‘‘ಸಾಮಾನ್ಯ ಪಾಸ್‌ಪೋರ್ಟ್’’ ಪಡೆಯಲು ನಿರಾಪೇಕ್ಷಣಾ ಪ್ರಮಾಣ ಪತ್ರ (ಎನ್‌ಒಸಿ) ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ ಅರ್ಜಿಗೆ ಶುಕ್ರವಾರದ ಒಳಗೆ ಲಿಖಿತ ಪ್ರತಿಕ್ರಿಯೆ ಸಲ್ಲಿಸುವಂತೆ ಮೆಟ್ರೋಪಾಲಿಟಿನ್ ನ್ಯಾಯಾಲಯ ಬುಧವಾರ ಬಿಜೆಪಿಯ ಮಾಜಿ ಸಂಸದ ಸುಬ್ರಹ್ಮಣ್ಯ ಸ್ವಾಮಿಗೆ ಸೂಚಿಸಿದೆ.
ಸಂಸದನ ಸ್ಥಾನದಿಂದ ಅನರ್ಹಗೊಂಡ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ತನ್ನ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ಹಿಂದಿರುಗಿಸಿದ್ದರು. ‘‘ಮೋದಿ’’ ಉಪನಾಮದ ಕುರಿತ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಸೂರತ್ ನ್ಯಾಯಾಲಯ 2 ವರ್ಷ ಗರಿಷ್ಠ ಜೈಲು ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ಅವರು ಸಂಸದನ ಸ್ಥಾನದಿಂದ ಅನರ್ಹಗೊಂಡಿದ್ದರು. ‘‘ರಾಜತಾಂತ್ರಿಕ ಪಾಸ್‌ಪೋರ್ಟ್’’ ಹಿಂದಿರುಗಿಸಿದ ಬಳಿಕ ಅವರು ಹೊಸ ‘‘ಸಾಮಾನ್ಯ ಪಾಸ್‌ಪೋರ್ಟ್’’ ಪಡೆಯಲು ‘‘ನಿರಾಪೇಕ್ಷಣಾ ಪ್ರಮಾಣ ಪತ್ರ’’ ಕೋರಿ ಮಂಗಳವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ರಾಹುಲ್ ಗಾಂಧಿ ಅವರನ್ನು ಪ್ರತಿನಿಧಿಸಿದ್ದ ನ್ಯಾಯವಾದಿ ತರನುಮ್ ಚೀಮಾ, ರಾಹುಲ್ ಗಾಂಧಿ ಅವರಿಗೆ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ಮಂಜೂರು ಮಾಡಬಹುದು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಈ ಸಂದರ್ಭ ರಾಹುಲ್ ಗಾಂಧಿ ಕೂಡ ಆರೋಪಿಯಾಗಿರುವ ನ್ಯಾಷನಲ್ ಹೆರಾಲ್ಡ್ ಪ್ರಕರಣದ ದೂರದಾರರಾಗಿರುವ ಡಾ. ಸುಬ್ರಹ್ಮಣ್ಯ ಸ್ವಾಮಿ, ನ್ಯಾಷನಲ್ ಹೆರಾಲ್ಡ್ ಪ್ರಕರಣ ವಿಚಾರಣೆಗೆ ಬಾಕಿ ಇದೆ. ಅರ್ಜಿದಾರರಿಗೆ ವಿದೇಶಕ್ಕೆ ಪ್ರಯಾಣಿಸಲು ಅವಕಾಶ ನೀಡಿದರೆ ನಡೆಯುತ್ತಿರುವ ತನಿಖೆಗೆ ಅಡ್ಡಿ ಉಂಟಾಗಬಹುದು ಎಂದು ಹೇಳಿದರು.
ಇದಕ್ಕೆ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ವೈಭವ್ ಮೆಹ್ತಾ, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ 2015ರಲ್ಲಿ ಜಾಮೀನು ನೀಡುವಾಗ ರಾಹುಲ್ ಗಾಂಧಿ ಅವರಿಗೆ ಪ್ರಯಾಣ ನಿರ್ಬಂಧ ವಿಧಿಸಿಲ್ಲ ಎಂದರು. ಅನಂತರ ವೈಭವ್ ಮೆಹ್ತಾ ಅವರು ಬಿಜೆಪಿ ನಾಯಕ ಸುಬ್ರಹ್ಮಣ್ಯ ಸ್ವಾಮಿ ಅವರಿಗೆ ಪ್ರತಿಕ್ರಿಯೆ ಸಲ್ಲಿಲು ಹಾಗೂ ವಾದ ಮಂಡಿಸಲು ಪ್ರಕರಣದ ಆಲಿಕೆಯನ್ನು ಶುಕ್ರವಾರಕ್ಕೆ ಮುಂದೂಡಿದರು.







