ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ; ಪ್ರಕರಣ ದಾಖಲು

ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾದ ಘಟನೆ ಲಗ್ಗೆರೆ ಬಳಿಯ ಚೌಡೇಶ್ವರಿನಗರದಲ್ಲಿ ನಡೆದಿದೆ.
ಕೊಲೆಯಾದ ಕಾಂಗ್ರೆಸ್ ಕಾರ್ಯಕರ್ತನನ್ನು ರವಿ ಅಲಿಯಾಸ್ ಮತ್ತಿ ರವಿ (42) ಎಂದು ಗುರುತಿಸಲಾಗಿದೆ. ರಾತ್ರಿ 11 ಗಂಟೆ ಸುಮಾರಿಗೆ ಕೃತ್ಯ ನಡೆದಿದೆ. ಬೈಕ್ ಗಳಲ್ಲಿ ಬಂದ ಐದಾರು ಮಂದಿ ಹತ್ಯೆಗೂ ಮುನ್ನ ಏರಿಯಾದಲ್ಲಿ ಹಾಕಿದ್ದ ಪ್ಲೆಕ್ಸ್ ನಲ್ಲಿದ್ದ ರವಿಕುಮಾರ್ ಪೋಟೋ ಹರಿದು ಹಾಕಿದ್ದು, ಪ್ರಾಣ ಭಯದಿಂದ ಓಡಿದ ರವಿಯನ್ನು ಅಟ್ಟಾಡಿಸಿ ಕೊಲೆಗೈಯ್ಯಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವೃತ್ತಿಯಲ್ಲಿ ಟೆಂಪೋ ಟ್ರಾವೆಲ್ಲರ್ ಚಾಲಕನಾಗಿದ್ದ ರವಿ ಕೆಲಸ ಮುಗಿಸಿಕೊಂಡು ಬಂದು ಮನೆಯಲ್ಲಿದ್ದ. ರವಿ ತನ್ನ ಮನೆಯಿಂದ ಬರುವುದನ್ನೇ ಕಾದು ಕುಳಿತಿದ್ದ ಆರೋಪಿಗಳು, ರವಿ ಮನೆಯಿಂದ ಹೊರಬರುತ್ತಿದ್ದಂತೆಯೇ ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಅಮಾನವೀಯನಾಗಿ ಹತ್ಯೆಗೈದಿದ್ದಾರೆ.
ಸ್ಥಳಕ್ಕೆ ನಂದಿನಿ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.