ಅತ್ಯಾಚಾರ ಪ್ರಕರಣದಲ್ಲಿ ಸ್ವಿಸ್ ನ್ಯಾಯಾಲಯದಿಂದ ದೋಷಮುಕ್ತಗೊಂಡ ಖ್ಯಾತ ಶಿಕ್ಷಣ ತಜ್ಞ ತಾರೀಖ್ ರಮದಾನ್

ಹೊಸದಿಲ್ಲಿ: ಖ್ಯಾತ ಸ್ವಿಸ್ ಶಿಕ್ಷಣ ತಜ್ಞ ಹಾಗೂ ಇಸ್ಲಾಮಿಕ್ ವಿದ್ವಾಂಸ ತಾರೀಖ್ ರಮದಾನ್ ಅವರು ಅತ್ಯಾಚಾರ ಪ್ರಕರಣದಲ್ಲಿ ದೋಷಮುಕ್ತರಾಗಿದ್ದಾರೆ. ಜಿನೇವಾದ ಹೋಟೆಲ್‌ನಲ್ಲಿ 2008ರಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರಗೈದ ಆರೋಪ ಅವರ ಮೇಲೆ ಹೊರಿಸಲಾಗಿತ್ತು. ಈಗ ದೋಷಮುಕ್ತಗೊಂಡ ಅವರಿಗೆ 151000 ಸ್ವಿಸ್ ಫ್ರಾಂಕ್ (167000 ಡಾಲರ್) ಪರಿಹಾರ ನೀಡುವಂತೆ ಸ್ವಿಸ್ ಕ್ಯಾಂಟನ್ ಆಫ್ ಜಿನೀವಾ ಆದೇಶಿಸಿದೆ.
ನ್ಯಾಯಾಲಯದ ಆದೇಶವನ್ನು ಪ್ರಶ್ನಿಸುವುದಾಗಿ ದೂರುದಾರೆ ಪರ ವಕೀಲರು ತಿಳಿಸಿದ್ದಾರೆ.
ಇಸ್ಲಾಂ ಸ್ವೀಕರಿಸಿದ್ದ ಸ್ವಿಸ್ ಮಹಿಳೆಯೊಬ್ಬರು ರಮಾದಾನ್ ತಮ್ಮ ಮೇಲೆ ಅಕ್ಟೋಬರ್ 28, 2008 ರಂದು ಅತ್ಯಾಚಾರಗೈದಿದ್ದಾರೆಂದು ಆರೋಪಿಸಿದ್ದರು.
ಇಸ್ಲಾಂ ಕುರಿತು ವಿವಿಧ ಬ್ರಿಟಿಷ್ ಸರಕಾರಗಳಿಗೆ ಸಲಹೆ ನೀಡುತ್ತಿದ್ದ 60 ವರ್ಷದ ರಮದಾನ್ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿಸುತ್ತಲೇ ಬಂದಿದ್ದರಲ್ಲದೆ ತಾವು ಯಾವತ್ತೂ ಯಾರ ಮೇಲೂ ಲೈಂಗಿಕ ಹಲ್ಲೆ ನಡೆಸಿಲ್ಲ ಎಂದಿದ್ದರು.
ಅವರು ಯುನಿವರ್ಸಿಟಿ ಆಫ್ ಆಕ್ಸ್‌ಫರ್ಡ್‌ನಲ್ಲಿ ಸಮಕಾಲೀನ ಇಸ್ಲಾಮಿಕ್ ಅಧ್ಯಯನದ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅತ್ಯಾಚಾರ ಆರೋಪ ಅವರ ಮೇಲೆ ಹೊರಿಸಲಾದ ನಂತರ ಅವರು 2017ರಿಂದ ಕರ್ತವ್ಯಕ್ಕೆ ಗೈರಾಗಿದ್ದರು. ಆಗ ಅವರ ವಿರುದ್ಧ ಫ್ರೆಂಚ್ ಮಹಿಳೆಯರ ಮೇಲೆ ಅತ್ಯಾಚಾರಗೈದ ಆರೋಪ ಹೊರಿಸಲಾಗಿತ್ತು. ಇದು ಫ್ರಾನ್ಸ್‌ನ 'ಮೀಟೂ' ಆಂದೋಲನದ ಪರಿಣಾಮ ಎಂದೇ ತಿಳಿಯಲಾಗಿತ್ತು. ಈ ಆರೋಪಗಳನ್ನೂ ಅವರು ನಿರಾಕರಿಸಿದ್ದರು. ಇದರ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ.
ಅನಾರೋಗ್ಯದ ಕಾರಣ ಅವರು 2021ರಲ್ಲಿ ಆಕ್ಸ್‌ಫರ್ಡ್ ವಿವಿ ಸೇವೆಯಿಂದ ಹಿಂದೆ ಸರಿದಿದ್ದರು.
ತಾನು ಪುಸ್ತಕ ಸಹಿ ಕಾರ್ಯಕ್ರಮ ಹಾಗೂ ನಂತರ ಬೇರೊಂದು ಸಮ್ಮೇಳನದಲ್ಲಿ ರಮಾದಾನ್ ಅವರನ್ನು ಭೇಟಿಯಾಗಿದ್ದಾಗಿ ಅವರ ವಿರುದ್ಧ ಆರೋಪ ಹೊರಿಸಿದ್ದ ಸ್ವಿಸ್ ಮಹಿಳೆ ಹೇಳಿದ್ದರು. ಅತ್ಯಾಚಾರದ ಮೂರು ಆರೋಪಗಳು ಹಾಗೂ ಲೈಂಗಿಕ ಸಂಪರ್ಕಕ್ಕಾಗಿ ಬಲವಂತ ಪಡಿಸಿದ್ದ ಒಂದು ಆರೋಪದಿಂದ ಅವರೀಗ ದೋಷಮುಕ್ತಗೊಂಡಿದ್ದಾರೆ.
ಫ್ರೆಂಚ್ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಅವರನ್ನು 2018ರಲ್ಲಿ ಬಂಧಿಸಲಾಗಿತ್ತಾದರೂ ಒಂಬತ್ತು ತಿಂಗಳ ನಂತರ ಬಿಡುಗಡೆಗೊಂಡಿದ್ದರು. ಆದರೆ ದೇಶ ಬಿಟ್ಟು ತೆರಳದಂತೆ ಸೂಚಿಸಲಾಗಿತ್ತು.







