ಬಜರಂಗದಳದಂತಹ ಸಂಘಟನೆಗಳನ್ನು ನಿಷೇಧಿಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ: ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು, ಮೇ 25 : 'ರಾಜ್ಯದಲ್ಲಿ ಬಜರಂಗದಳದಂತಹ ಸಂಘಟನೆಗಳನ್ನು ನಿಷೇಧಿಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಈ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿದ್ದರೆ ಅದು ಅವರ ವೈಯಕ್ತಿಕವಾಗಿರಬಹುದು' ಎಂದು ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಶಾಂತಿ ಕದಡಿದರೆ ಆರೆಸ್ಸೆಸ್ ಮತ್ತು ಭಜರಂಗದಳದಂತ ಸಂಘಟನೆಗಳನ್ನು ಸರ್ಕಾರವು ನಿಷೇಧಿಸುತ್ತದೆ ಎಂಬ ತಮ್ಮ ಸಂಪುಟ ಸಹೋದ್ಯೋಗಿ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿ ಅವರು, ''ನಾವು ಪ್ರಣಾಳಿಕೆಯಲ್ಲಿ ಬಜರಂಗದಳ ಮತ್ತು ಪಿಎಫ್‌ಐಗೆ ಸಂಬಂಧಿಸಿದಂತೆ ಹೇಳಿದ್ದೆವು. ಒಂದು ವೇಳೆ ಅವುಗಳು ಶಾಂತಿಗೆ ಕದಡಿದರೆ , ನಾವು ಅಂತಹ ಸಂಘಟನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ, ಅಗತ್ಯವಿದ್ದರೆ ಅವುಗಳನ್ನು ನಿಷೇಧಿಸುವ ಮಟ್ಟಕ್ಕೂ ಹೋಗುತ್ತೇವೆ. ಅದನ್ನು ಬಿಟ್ಟು ಈ ಬಗ್ಗೆ ಬೇರೆ ಯಾವುದೇ ಚರ್ಚೆ ನಡೆದಿಲ್ಲ'' ಎಂದು ಸ್ಪಷ್ಟಪಡಿಸಿದರು.
'ಕೆಲವರು ಅವರ ವೈಯಕ್ತಿಕ ಅಭಿಪ್ರಾಯ ಹಂಚಿಕೊಂಡಿರಬಹುದು, ಆದರೆ ಇದೆಲ್ಲ ಚರ್ಚೆಯಾಗಬೇಕಿದೆ, ಪರಿಸ್ಥಿತಿ ಬಂದಾಗ ಸರ್ಕಾರ ಚರ್ಚಿಸಿ ತೀರ್ಮಾನಿಸಲಿದೆ' ಎಂದರು.