ಮೇ 26ರಿಂದ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆ
ಉಡುಪಿ, ಮೇ 25: ಉಡುಪಿ ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ವತಿಯಿಂದ ಪಿ.ಶಿವಾಜಿ ಶೆಟ್ಟಿ ಸ್ಮಾರಕ ಏಳನೇ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಯನ್ನು ಮೇ 26ರಿಂದ ಮೇ 28ರವರೆಗೆ ವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಮೇ 26ರಂದು ಸಂಜೆ 5ಗಂಟೆಗೆ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಾ.ಸಿ.ಬಸವರಾಜು ಉದ್ಘಾಟಿಸ ಲಿರುವರು. ಬೆಂಗಳೂರಿನ ಮಣಿಪಾಲ್ ಕಾನೂನು ಶಾಲೆಯ ನಿರ್ದೇಶಕ ಡಾ.ಅವಿನಾಶ್ ದದೀಚ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು ಎಂದು ಕಾಲೇಜಿನ ನಿರ್ದೇಶಕಿ ಡಾ.ನಿರ್ಮಲಾ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಮೇ 28ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಭಾಗವಹಿಸಲಿರುವರು. ಈ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳ ಕಾನೂನು ಕಾಲೇಜುಗಳ 28 ತಂಡಗಳು ಭಾಗವಹಿಸಲಿವೆ. ಪ್ರತಿ ತಂಡದಲ್ಲಿ ಮೂವರು ವಿದ್ಯಾರ್ಥಿಗಳಿರುತ್ತಾರೆ. ಅದೇ ರೀತಿ ತೀರ್ಪು ಬರವಣಿಗೆ ಸ್ಪರ್ಧೆಯನ್ನು ಕೂಡ ಏರ್ಪಡಿಸಲಾಗಿದ್ದು, ಇದರಲ್ಲಿ ತಂಡದ ಒಬ್ಬರು ಭಾಗವಹಿಸಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಾಂಶುಪಾಲ ಪ್ರೊ.ರಘುನಾಥ್, ಸಂಯೋಜಕಿ ಸುರೇಖಾ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶ್ರೀಧರ್ ಪಿ.ಎಸ್., ಉಪಾಧ್ಯಕ್ಷ ಎಚ್.ರಾಘವೇಂದ್ರ ಉಪಸ್ಥಿತರಿದ್ದರು.