ಆಯುರ್ವೇದಕ್ಕೆ ವಿಶ್ವ ಮನ್ನಣೆ: ಡಾ.ಪ್ರಸನ್ನ ಎನ್.ರಾವ್

ಉಡುಪಿ : ಆಯುರ್ವೇದವು ವಿಶ್ವಮನ್ನಣೆಯನ್ನು ಗಳಿಸುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ನಿಷ್ಠೆಯಿಂದ ಆಯುರ್ವೇದದ ಅಧ್ಯಯನ ಹಾಗೂ ಸಂಶೋಧನೆಯಲ್ಲಿ ತೊಡಗಿಕೊಳ್ಳಬೇಕು ಎಂದು ಹಾಸನ ಎಸ್‌ಡಿಎಂ. ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಸನ್ನ ಎನ್.ರಾವ್ ಹೇಳಿದ್ದಾರೆ.
ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾ ವಿದ್ಯಾಲಯದ ೨೪ನೇ ಶಿಷ್ಯೋಪನಯನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ಮಮತಾ ಕೆ.ವಿ. ಮಾತನಾಡಿ, ದೀಕ್ಷಾ ಬದ್ಧರಾದ ವಿದ್ಯಾರ್ಥಿಗಳು ಕಾಲೇಜಿನ ಎಲ್ಲಾ ಸೌಕರ್ಯಗಳ ಸದುಪಯೋಗವನ್ನು ಪಡೆದು ಕೊಂಡು ಉತ್ತಮ ವೈದ್ಯರಾಗುವ ತಮ್ಮ ಕನಸನ್ನು ನನಸಾಗಿಸಲು ಪ್ರಯತ್ನಿಸಬೇಕು ಎಂದು ಶುಭ ಹಾರೈಸಿದರು.
ಹಾಸನ ಎಸ್.ಡಿ.ಎಂ. ಆಯುರ್ವೇದ ಕಾಲೇಜಿನ ಉಪಪ್ರಾಂಶುಪಾಲ ಡಾ. ಶೈಲಜಾ ಮಾತನಾಡಿದರು. ಶೈಕ್ಷಣಿಕ ವಿಭಾಗದ ಮುಖ್ಯಸ್ಥೆ ಡಾ. ಶ್ರೀಲತಾ ಕಾಮತ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ಬೋಧನೆ ನೆರವೇರಿಸಿದರು. ಆಡಳಿತ ವಿಭಾಗದ ಮುಖ್ಯಸ್ಥ ಡಾ.ವೀರಕುಮಾರ ಕೆ. ವಾರ್ಷಿಕ ವರದಿ ವಾಚನ ಮಾಡಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀನಿಧಿ ಎಸ್.ಶೆಟ್ಟಿ ವಿದ್ಯಾರ್ಥಿ ಸಂಘದ ವರದಿಯನ್ನು ವಾಚಿಸಿದರು. ವಿದ್ಯಾರ್ಥಿ ಪ್ರತಿನಿಧಿ ಡಾ.ಪಲ್ಲವಿ ಪೂಜಾರಿ ಸಂದೇಶ ವಾಚಿಸಿದರು.
ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್ ಎಸ್. ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನಾಯಕ ಜೊಸ್ ವಂದಿಸಿದರು. ಸಂಹಿತಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮಹಾಲಕ್ಷ್ಮಿ ಎಂ.ಎಸ್. ಹಾಗೂ ಅಗದತಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶುಭ ಪಿ.ಯು. ಕಾರ್ಯಕ್ರಮ ನಿರೂಪಿಸಿದರು. ಸಹಪ್ರಾಧ್ಯಾಪಕ ಡಾ.ವಿಜಯೇಂದ್ರ ಭಟ್, ಡಾ. ಲಿಖಿತಾ ಡಿ.ಎನ್. ಮತ್ತು ಡಾ.ಅರುಣ್‌ಕುಮಾರ್ ಕಾರ್ಯಕ್ರಮ ಸಂಯೋಜಿಸಿದ್ದರು. ಆನಂತರ ಅಂಕುರ ಮತ್ತು ಸಂಭ್ರಮ ಶೀರ್ಷಿಕೆಯಡಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.