ಮಂಗಳೂರು: ಎರಡು ಆನ್‌ಲೈನ್ ವಂಚನೆ ಪ್ರಕರಣ ದಾಖಲು

ಮಂಗಳೂರು, ಮೇ 25: ನಗರದಲ್ಲಿ ನಡೆದ ಎರಡು ಆನ್‌ಲೈನ್ ವಂಚನೆ ಪ್ರಕರಣದ ಬಗ್ಗೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
*ಆನ್‌ಲೈನ್‌ನಲ್ಲಿ ಪಾರ್ಟ್‌ಟೈಮ್ ಹಣಗಳಿಸುವ ಕೆಲಸದ ಕುರಿತು ಲಿಂಕ್ ಕಳುಹಿಸಿ 1.15 ಲಕ್ಷ ರೂ. ವಂಚಿಸಿರುವುದಾಗಿ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ದೂರುದಾರರಿಗೆ ಮೇ 23ರಂದು ಅಪರಿಚಿತ ವ್ಯಕ್ತಿಯೊಬ್ಬ ಆನ್‌ಲೈನ್ ಪಾರ್ಟ್‌ಟೈಮ್ ಹಣ ಗಳಿಸುವ ಕೆಲಸವಿರುವುದಾಗಿ ವಾಟ್ಸ್‌ಆ್ಯಪ್ ಮೂಲಕ ತಿಳಿಸಿ ಲಿಂಕ್ ಕಳುಹಿಸಿದ್ದ ಎನ್ನಲಾಗಿದೆ.
ಲಿಂಕ್ ಕ್ಲಿಕ್ ಮಾಡಿದಾಗ ಟೆಲಿಗ್ರಾಂ ಸಂಪರ್ಕ ಹೊಂದಿದ್ದು, ಆ ಮೂಲಕ ಆನ್‌ಲೈನ್ ಟಾಸ್ಕ್ ಬಗ್ಗೆ ಆತ ತಿಳಿಸಿದಂತೆ ಟಾಸ್ಕ್‌ಗಳನ್ನು ಪೂರ್ಣಗೊಳಿಸಿದ್ದರು. ಬಳಿಕ ಹಂತ ಹಂತವಾಗಿ 650 ರೂ., 2 ಸಾವಿರ ರೂ., 2,800 ರೂ. ಗಳನ್ನು ನೀಡಿದ್ದಾರೆ. 24ರಂದು ಮತ್ತೊಮ್ಮೆ ಟಾಸ್ಕ್ ಗಳನ್ನು ನೀಡಿದಾಗ ಪೂರ್ಣಗೊಳಿಸಿದ ಕಾರಣ 300 ರೂ. ಪಾವತಿಸಿದ್ದಾರೆ. ಬಳಿಕ ಬೇರೊಂದು ಟೆಲೆಗ್ರಾಂ ಐಡಿ ಮೂಲಕ ಟಾಸ್ಕ್‌ಗಳನ್ನು ಪೂರ್ಣಗೊಳಿಸಲು 5,000 ರೂ. ಪಾವತಿಸಲು ತಿಳಿಸಿದ್ದು, ಅದರಂತೆ 5,000 ರೂ. ಪಾವತಿಸಿದ್ದಾರೆ. ಎಲ್ಲಾ ಟಾಸ್ಕ್ ಗಳನ್ನು ಪೂರ್ಣಗೊಳಿಸಿದಾಗ ಹಣ ದೊರೆಯುತ್ತದೆ ಎಂದು ಆತ ತಿಳಿಸಿದ್ದ. ಅದನ್ನು ನಂಬಿದ ದೂರುದಾರರು 65,000 ರೂ. ಮತ್ತು ಇನ್ನೊಬ್ಬ ಅಪರಿಚಿತ ವ್ಯಕ್ತಿಯ ಖಾತೆಗೆ 45 ಸಾವಿರ ರೂ. ಪಾವತಿಸಿದ್ದಾರೆ. ಹೀಗೆ 1,15,000 ರೂ. ವನ್ನು ಮೋಸದಿಂದ ವರ್ಗಾಯಿಸಿಕೊಂಡು ವಂಚನೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬ್ಯಾಂಕ್ ಖಾತೆ ಬ್ಲಾಕ್ ಆಗಿದ್ದು, ಕೆವೈಸಿ ಅಪ್‌ಡೇಟ್ ಮಾಡಬೇಕು ಎಂಬ ಸಂದೇಶವನ್ನು ನಂಬಿದ ವ್ಯಕ್ತಿಯೊಬ್ಬರು 3.10 ಲಕ್ಷ ರೂ. ಕಳೆದುಕೊಂಡಿರುವುದಾಗಿ ಸೆನ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮೇ 24ರಂದು ನಿಮ್ಮ ಬ್ಯಾಂಕ್ ಖಾತೆ ಬ್ಲಾಕ್ ಆಗಿದ್ದು, ಕೆವೈಸಿ ಅಪ್ ಡೇಟ್ ಮಾಡಬೇಕು ಎಂಬ ಸಂದೇಶ ದೂರುದಾರರಿಗೆ ಬಂದಿದೆ. ಬಳಿಕ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು, ಕೆವೈಸಿ ಅಪ್‌ಡೇಟ್ ಮಾಡುವ ಅಧಿಕಾರಿ ಎಂದು ಪರಿಚಯ ಮಾಡಿದ ಆತ ಕಸ್ಟಮರ್ ಐಡಿ ಕೇಳಿದ್ದಾನೆ. ನಂತರ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ನಂಬರ್ ಕೇಳಿದ್ದು, ಅನಂತರ ಮೊಬೈಲ್‌ಗೆ ಬಂದ ಒಟಿಪಿಯನ್ನು ಪಡೆದುಕೊಂರಿದ್ದಾನೆ. ಒಟಿಪಿ ನೀಡಿದ ಕೂಡಲೇ ಖಾತೆಯಿಂದ ಹಂತ ಹಂತವಾಗಿ 3,10,000 ರೂ. ವರ್ಗಾವಣೆಯಾಗಿದೆ.
ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ, ಒಟಿಪಿ ಪಡೆದು ಖಾತೆಯಿಂದ ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.