ಬಿಜೆಪಿಯ ಸಹವಾಸದಿಂದ ಉಪವಾಸ ಬಿದ್ದ ಜೆಡಿಎಸ್

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಈ ಬಾರಿ ಬರೇ 19 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡು ರಾಜ್ಯದಲ್ಲಿ ಹೀನಾಯ ಸ್ಥಿತಿ ತಲುಪಿರುವ ಜೆಡಿಎಸ್, ತನ್ನ ಸಮಯ ಸಾಧಕ ರಾಜಕಾರಣಕ್ಕೆ ಸರಿಯಾದ ರೀತಿಯ ಪಾಠವನ್ನು ಮತದಾರರಿಂದ ಹೇಳಿಸಿಕೊಂಡಿದೆ. ಸೋಲಿಗೆ ತಲೆಬಾಗಿ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹೀಂ ತಮ್ಮ ರಾಜೀನಾಮೆಯನ್ನು ನೀಡಿದ್ದು, ಯುವರಾಜನೆಂದು ಜೆಡಿಎಸ್‌ನಲ್ಲಿ ಗುರುತಿಸಲ್ಪಟ್ಟ ನಿಖಿಲ್ ಕುಮಾರ ಸ್ವಾಮಿಯವರು ಯುವ ಘಟಕದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಆದರೆ ಈ ರಾಜೀನಾಮೆಗಳ ಮೂಲಕ ಜೆಡಿಎಸ್ ರಾಜ್ಯದಲ್ಲಿ ಕಳೆದುಕೊಂಡ ಮಾನವನ್ನು ಮರಳಿ ಪಡೆಯುತ್ತದೆ ಎನ್ನುವಂತಿಲ್ಲ. ದೇವೇಗೌಡರು ರಾಜಕೀಯವಾಗಿ ಅಘೋಷಿತ ನಿವೃತ್ತಿಯನ್ನು ಪ್ರಕಟಿಸಿದ್ದು, ಕುಮಾರಸ್ವಾಮಿಯವರೊಬ್ಬರೇ ಸೋಲಿನ ಎಲ್ಲ ಭಾರವನ್ನು ತಾಳಿಕೊಳ್ಳಬೇಕಾದ ಪರಿಸ್ಥಿತಿ ಪಕ್ಷದಲ್ಲಿ ನಿರ್ಮಾಣವಾಗಿದೆ. ‘ತನ್ನ ಮಗನಿಗೆ ಮದುವೆ ಮಾಡಲು ಕೈಯಲ್ಲಿ ಕಾಸಿಲ್ಲ’ ಎಂದು ಅಳುತ್ತಾ ಕಾಂಗ್ರೆಸ್ ಬಿಟ್ಟ ಸಿ.ಎಂ. ಇಬ್ರಾಹೀಮರಿಗೆ ಮತದಾರರೇ ಸೇರಿ ‘ಮದುವೆ ಮಾಡಿಸಿದ್ದಾರೆ’ ಎನ್ನುವ ವ್ಯಂಗ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಿ. ಎಂ. ಇಬ್ರಾಹೀಂರ ಪಕ್ಷಾಂತರದಿಂದ ಕಾಂಗ್ರೆಸ್‌ಗಂತೂ ದೊಡ್ಡ ಮಟ್ಟದ ಲಾಭವಾಗಿದೆ. ಒಂದು ವೇಳೆ ಅವರು ಕಾಂಗ್ರೆಸ್‌ನಲ್ಲೇ ಇದ್ದಿದ್ದರೆ, ಇದೀಗ ಸಿದ್ದರಾಮಯ್ಯರ ಪಾಲಿಗೆ ಗಂಟಲ ಮುಳ್ಳಾಗಿ ಬಿಡುತ್ತಿದ್ದರು. ತನ್ನ ಮಗನ ಜೊತೆಗೆ ನೇರವಾಗಿ ಬಿಜೆಪಿ ಸೇರುವ ಅರ್ಥಪೂರ್ಣವಾದ ಅವಕಾಶವೊಂದು ಸಿ. ಎಂ. ಇಬ್ರಾಹೀಂ ಪಾಲಿಗೆ ಉಳಿದುಕೊಂಡಿದೆ.. ಅಥವಾ ಜೆಡಿಎಸ್‌ನ್ನು 19 ಸ್ಥಾನಕ್ಕೆ ತಂದು ನಿಲ್ಲಿಸಿದ ತನ್ನ ಸಾಧನೆಯನ್ನು ಮುಂದಿಟ್ಟುಕೊಂಡು ಮತ್ತೆ ಕಾಂಗ್ರೆಸ್ ಬಾಗಿಲು ತಟ್ಟಿದರೂ ಅಚ್ಚರಿಯಿಲ್ಲ.
ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮೊದಲ ಬಾರಿಗೆ ತಮ್ಮ ಸೋಲನ್ನು ಸಾರ್ವಜನಿಕ ವೇದಿಕೆಯಲ್ಲಿ ವಿಶ್ಲೇಷಿಸಿದ್ದಾರೆ. ‘‘ಚುನಾವಣೆಯ ಸಂದರ್ಭದಲ್ಲಿ ಯಾವುದೇ ವೈಯಕ್ತಿಕ ದಾಳಿ, ಜಾತಿ ನಿಂದನೆಗಳನ್ನು ಮಾಡಿಲ್ಲ. ಹಾಗೆಯೇ ಬಿಜೆಪಿಯ ಭ್ರಷ್ಟಾಚಾರವನ್ನು ಚುನವಾಣೆಯಲ್ಲಿ ಎತ್ತದೇ, ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಪ್ರಚಾರ ಮಾಡಿದೆವು. ಇದು ಬಹುಶಃ ನಮಗೆ ಮುಳುವಾಗಿರಬಹುದು’ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಹಾಗೆಯೇ ಬೆಂಗಳೂರಿನಲ್ಲಿ ಪಕ್ಷ ಸಂಘಟನೆಯ ಹೀನಾಯ ಸ್ಥಿತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಾ ‘‘ಚುನಾವಣೆ ಹತ್ತಿರಕ್ಕೆ ಬಂದಾಗ ಗೋಳಾಡಿ ಬಿ ಫಾರಂ ತೆಗೆದುಕೊಂಡು ಹೋಗುತ್ತೀರಿ. ಆಮೇಲೆ ಪ್ರತಿಸ್ಪರ್ಧಿ ಜೊತೆಗೆ ಒಂದಾಗುತ್ತೀರಿ’’ ಎಂದು ಹೇಳಿದ್ದಾರೆ. ಇದು ಸ್ವತಃ ಕುಮಾರಸ್ವಾಮಿಯವರಿಗೇ ಅನ್ವಯವಾಗುವ ಆರೋಪ. ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಭ್ರಷ್ಟಾಚಾರವನ್ನು ಜೆಡಿಎಸ್ ಯಾಕೆ ವಿಷಯವಾಗಿಸಲಿಲ್ಲ? ಶೇ. 40 ಕಮಿಷನ್‌ಗಾಗಿ ರಾಜ್ಯ ಬಿಜೆಪಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿರುವಾಗ ತನ್ನನ್ನು ತಾನು ‘ಪ್ರಾದೇಶಿಕ ಪಕ್ಷ’ ಎಂದು ಕರೆದುಕೊಳ್ಳುವ ಜೆಡಿಎಸ್‌ಗೆ ಅದು ಮಹತ್ವದ್ದು ಎಂದು ಯಾಕೆ ಅನ್ನಿಸಲಿಲ್ಲ? ಈ ಚುನಾವಣೆಯಲ್ಲಿ ಪರೋಕ್ಷವಾಗಿ ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ಕೈ ಜೋಡಿಸಿತ್ತೆ? ಸಮಯ ಬಂದಾಗ ಜೆಡಿಎಸ್ ವರಿಷ್ಠರೇ ತನ್ನ ಸ್ಪರ್ಧಿಗಳ ಜೊತೆಗೆ ಕೈಜೋಡಿಸಿದ ಉದಾಹರಣೆಗಳಿರುವಾಗ, ಅದನ್ನು ಪಕ್ಷದ ಕಿರಿಯ ಮುಖಂಡರು ಮಾದರಿಯಾಗಿಸಿಕೊಂಡಾಗ ಆಕ್ಷೇಪ ಯಾಕೆ?
ಜೆಡಿಎಸ್ ಈ ಬಾರಿಯ ಚುನಾವಣೆಯಲ್ಲಿ ಆಳುವ ಪಕ್ಷ ಬಿಜೆಪಿಯ ವಿರುದ್ಧ ಟೀಕೆ ಮಾಡಿರುವುದು ತೀರಾ ಕಡಿಮೆ. ಹಲವು ಹಗರಣಗಳಲ್ಲಿ ಬಿಜೆಪಿ ಸರಕಾರ ಸಿಲುಕಿಕೊಂಡಾಗ ಅವುಗಳನ್ನು ಟೀಕಿಸದೆ ಮೌನ ತಾಳಿತ್ತು. ವಿಪರ್ಯಾಸವೆಂದರೆ, ಅಧಿಕಾರದಲ್ಲಿಲ್ಲದ ಕಾಂಗ್ರೆಸ್‌ನ ವಿರುದ್ಧದ ಟೀಕೆಗಳಲ್ಲೇ ಕುಮಾರಸ್ವಾಮಿ ಕಾಲ ಕಳೆದರು. ಆರೆಸ್ಸೆಸ್ ಕುಮ್ಮಕ್ಕಿನೊಂದಿಗೆ ಬಿಜೆಪಿ ಸರಕಾರ ಅಲ್ಪಸಂಖ್ಯಾತರ ಮೇಲೆ ನಡೆಸಿದ ದೌರ್ಜನ್ಯಗಳ ಸಂದರ್ಭದಲ್ಲೂ ಜೆಡಿಎಸ್ ಮಧ್ಯ ಪ್ರವೇಶಿಸಲಿಲ್ಲ. ಹಿಜಾಬ್ ನಿಷೇಧ, ಪಠ್ಯ ಪುಸ್ತಕ ತಿರುಚುವಿಕೆಯಂತಹ ಬೇಜವಾಬ್ದಾರಿ ನಿರ್ಧಾರಗಳನ್ನು ಸರಕಾರ ತೆಗೆದುಕೊಂಡಾಗ ಅದರ ವಿರುದ್ಧ ನಿರ್ಣಾಯಕ ಪಾತ್ರವನ್ನು ವಹಿಸುವ ಅವಕಾಶ ಜೆಡಿಎಸ್‌ಗಿತ್ತು. ಆದರೆ ಜೆಡಿಎಸ್ ಪಕ್ಷವು ಬಿಜೆಪಿ ಸರಕಾರದ ಬಗ್ಗೆ ಮೃದು ಧೋರಣೆಯನ್ನು ತಳೆದಿತ್ತು. ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಸರಕಾರ ರಚನೆಯಾಗುತ್ತದೆ ಎನ್ನುವ ಆಶಾವಾದವೇ ಬಿಜೆಪಿಯ ಕುರಿತಂತೆ ಜೆಡಿಎಸ್ ಮೃದು ಧೋರಣೆಗೆ ಮುಖ್ಯ ಕಾರಣ. ಈ ಬಾರಿಯ ಚುನಾವಣೆಯಲ್ಲಿ ಸಂದರ್ಭ ಎದುರಾದರೆ ಬಿಜೆಪಿಯ ಜೊತೆಗೆ ಮತ್ತೊಮ್ಮೆ ಮೈತ್ರಿಗೆ ಅವರು ಸಿದ್ಧರಾಗಿದ್ದರು. ಬಹುಶಃ ಕಾಂಗ್ರೆಸ್ ಅಲ್ಪ ಬಹುಮತ ಪಡೆದರೂ ಸಂದರ್ಭದ ಲಾಭ ಪಡೆಯಲು ಅವರು ತಯಾರಾಗಿದ್ದರು. ಜೆಡಿಎಸ್‌ನ ಈ ಸಮಯ ಸಾಧಕ ರಾಜಕಾರಣದ ದಿಕ್ಕನ್ನು ಈ ಬಾರಿ ಮತದಾರರು ಸ್ಪಷ್ಟವಾಗಿ ಗುರುತಿಸಿದ್ದರು. ಜೆಡಿಎಸ್‌ಗೆ ನೀಡುವ ಮತಗಳು ಪರೋಕ್ಷವಾಗಿ ಬಿಜೆಪಿಗೆ ನೀಡುವ ಮತಗಳೆನ್ನುವುದನ್ನು ಅರ್ಥ ಮಾಡಿಕೊಂಡು ಮತ ಚಲಾಯಿಸಿದರು. ಅಭಿವೃದ್ಧಿಯ ಕುರಿತಂತೆಯೂ ಜೆಡಿಎಸ್‌ಗೆ ಸ್ಪಷ್ಟತೆಯಿರಲಿಲ್ಲ. ಪಂಚ ರತ್ನ ರಥಯಾತ್ರೆಯನ್ನು ಕುಮಾರಸ್ವಾಮಿ ಹಮ್ಮಿಕೊಂಡರಾದರೂ, ಆ ಯಾತ್ರೆಗೆ ಯಾವುದೇ ರೀತಿಯ ಜನಸ್ಪಂದನ ಸಿಗಲಿಲ್ಲ. ಸ್ವತಃ ಜೆಡಿಎಸ್ ಕಾರ್ಯಕರ್ತರಿಗೇ ಈ ಪಂಚರತ್ನದ ಉದ್ದೇಶ ಸ್ಪಷ್ಟವಿರಲಿಲ್ಲ. ಒಟ್ಟಿನಲ್ಲಿ ಯಾವ ವಿಷಯದ ಮೇಲೆ ಚುನಾವಣೆಯನ್ನು ಎದುರಿಸಬೇಕು ಎನ್ನುವ ಬಗ್ಗೆ ಜೆಡಿಎಸ್‌ಗೆ ಭಾರೀ ಗೊಂದಲವಿತ್ತು. ಅಲ್ಪಸಂಖ್ಯಾತರನ್ನು ಈ ಹಿಂದಿನಂತೆ ಮೋಸದ ಮಾತುಗಳಿಂದ ಮರುಳು ಮಾಡುವುದು ಸಾಧ್ಯವಾಗಲಿಲ್ಲ. ಸಿ. ಎಂ. ಇಬ್ರಾಹೀಂರನ್ನು ತಮ್ಮ ನಾಯಕರೆಂದು ರಾಜ್ಯದ ಮುಸ್ಲಿಮರು ಭಾವಿಸುವುದಕ್ಕೆ ಸಿದ್ಧರಾಗಿಯೇ ಇರಲಿಲ್ಲ. ಎಲ್ಲದರ ಪರಿಣಾಮವಾಗಿ ಜೆಡಿಎಸ್ ಹೀನಾಯ ಸೋಲನ್ನು ಕಾಣಬೇಕಾಯಿತು.
ಈ ಹೀನಾಯ ಸೋಲಿನ ಬಳಿಕವೂ ಕುಮಾರಸ್ವಾಮಿಯವರ ಅಧಿಕಾರದ ಆಸೆ ಬತ್ತಿಲ್ಲ. ಲೋಕಸಭಾ ಚುನಾವಣೆಯ ಬಳಿಕ ರಾಜ್ಯಸರಕಾರದಲ್ಲಿ ಬಿರುಕು ಕಾಣಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ ಅವರು. ಬಿಜೆಪಿ ಆಳುತ್ತಿದ್ದಾಗ ಅದರ ಶೇ. 40 ಕಮಿಶನ್ ಬಗ್ಗೆ ಮೌನವಾಗಿದ್ದ ಕುಮಾರಸ್ವಾಮಿಯವರು, ಸರಕಾರ ರಚನೆಯಾಗಿ ವಾರವೂ ಉರುಳಿಲ್ಲ ಅಷ್ಟರಲ್ಲೇ ಕಾಂಗ್ರೆಸ್ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದಾರೆ. ‘‘ಗ್ಯಾರಂಟಿಗಳನ್ನು ಇನ್ನೂ ಜಾರಿಗೊಳಿಸದೆ ಇರುವುದರ ಬಗ್ಗೆ’’ ಪ್ರಶ್ನಿಸುತ್ತಿದ್ದಾರೆ. ಇದೇ ಕುಮಾರಸ್ವಾಮಿಯವರು, ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾಗಿರುವ ಹಣದ ಬಗ್ಗೆ ಮಾತ್ರ ತುಟಿ ಬಿಚ್ಚುತ್ತಿಲ್ಲ. ಪ್ರತೀ ವರ್ಷ ಈ ನಾಡು ಕೇಂದ್ರಕ್ಕೆ ಹಲವು ಲಕ್ಷ ಕೋಟಿ ರೂ.ತೆರಿಗೆಯನ್ನು ಪಾವತಿಸುತ್ತಿದೆ. ಆದರೆ ಈ ತೆರಿಗೆಯ ರಾಜ್ಯದ ಪಾಲನ್ನು ಕೇಂದ್ರ ಸರಕಾರ ಮರಳಿಸದೆ ಉಳಿಸಿಕೊಂಡಿದೆ. ಯೋಜನೆಯ ಕಾಮಗಾರಿಗಳಿಗಾಗಿ ನೀಡಬೇಕಾಗಿದ್ದ ಹಣವನ್ನೂ ಬಾಕಿ ಉಳಿಸಿಕೊಂಡಿದೆ. ಆದರೂ ಕೇಂದ್ರ ಸರಕಾರದ ಬಗ್ಗೆ ಜೆಡಿಎಸ್ ಯಾಕೆ ಮೌನವಾಗಿದೆ? ನೂತನ ಸಂಸತ್ ಭವನವನ್ನು ಪ್ರಧಾನಿ ಉದ್ಘಾಟಿಸುತ್ತಿರುವುದನ್ನು ವಿರೋಧಿಸಿ ವಿರೋಧ ಪಕ್ಷಗಳು ಸಂಘಟಿತವಾಗಿ ಸಮಾರಂಭಕ್ಕೆ ಬಹಿಷ್ಕಾರ ಹಾಕಿವೆೆ. ಇದೇ ಸಂದರ್ಭದಲ್ಲಿ ದೇವೇಗೌಡರು ಮಾತ್ರ ‘ಸಮಾರಂಭದಲ್ಲಿ ಭಾಗಿಯಾಗುತ್ತೇನೆ’ ಎಂದಿದ್ದಾರೆ. ‘ನೂತನ ಸಂಸತ್ ಭವನ ಬಿಜೆಪಿಯ ಕಚೇರಿಯಲ್ಲ. ಅದರಲ್ಲಿ ರಾಜಕೀಯ ತರವಲ್ಲ’ ಎಂದೂ ತನ್ನನ್ನು ತಾನು ಸಮರ್ಥಿಸಿಕೊಂಡಿದ್ದಾರೆ. ನೂತನ ಸಂಸತ್‌ಭವನದ ಹಿರಿಮೆಯನ್ನು ಅರಿತುಕೊಂಡಿದ್ದರೆ ದೇವೇಗೌಡರು ‘‘ಸಂಸತ್ ಭವನವನ್ನು ರಾಷ್ಟ್ರಪತಿ ಉದ್ಘಾಟಿಸಲಿ’’ ಎಂದು ಹೇಳಿಕೆ ನೀಡುತ್ತಿದ್ದರು. ಸಂಸತ್ ಭವನವನ್ನು ರಾಷ್ಟ್ರಪತಿಯ ಬದಲಿಗೆ ಪ್ರಧಾನಿ ಉದ್ಘಾಟಿಸುವುದು ಎಷ್ಟು ಸರಿ ಎನ್ನುವ ಪ್ರಶ್ನೆಗೆ ದೇವೇಗೌಡರಲ್ಲಿ ಉತ್ತರವಿಲ್ಲ. ಇವೆಲ್ಲವೂ, ಕಳೆದ ಚುನಾವಣೆಯ ಫಲಿತಾಂಶದಿಂದ ಜೆಡಿಎಸ್ ಪಾಠ ಕಲಿತಿಲ್ಲ ಎನ್ನುವುದನ್ನು ಹೇಳುತ್ತವೆ. ಮುಂದಿನ ಲೋಕಸಭೆಯ ಚುನಾವಣೆಯಲ್ಲಿ ಪ್ರಧಾನಿ ಮೋದಿ ಮತ್ತೊಮ್ಮೆ ಆಯ್ಕೆಯಾಗಿ, ರಾಜ್ಯದಲ್ಲಿ ಸರಕಾರ ಅತಂತ್ರಗೊಳ್ಳುವ ಘಳಿಗೆಗೆ ಕಾಯುತ್ತಿರುವ ತಂದೆ-ಮಕ್ಕಳ ಪಕ್ಷದಿಂದ ರಾಜ್ಯ ಯಾವುದೇ ವಿಶೇಷ ನಿರೀಕ್ಷೆ ಗಳನ್ನು ಇಡುವಂತಿಲ್ಲ.