ಪೋಕ್ಸೋ ಕಾಯಿದೆಯ ದುರುಪಯೋಗ ನಡೆಯುತ್ತಿದೆ: ಬ್ರಿಜ್ ಭೂಷಣ್ ಸಿಂಗ್
ಹೊಸದಿಲ್ಲಿ: ಪೋಕ್ಸೋ ಕಾಯಿದೆಯನ್ನು ದುರುಪಯೋಗಪಡಿಸಲಾಗುತ್ತಿದೆ ಎಂದು ಹಲವಾರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತದ ಕುಸ್ತಿಪಟು ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಗುರುವಾರ ಹೇಳಿಕೊಂಡಿದ್ದಾರೆ.
“ಮಕ್ಕಳು, ವಯಸ್ಕರು ಮತ್ತು ಸಂತರನ್ನು ಗುರಿಯಾಗಿಸಿ ಪೋಕ್ಸೋ ಕಾಯಿದೆಯನ್ನು ದುರುಪಯೋಗಪಡಿಸಲಾಗುತ್ತಿದೆ, ಅಧಿಕಾರಿಗಳೂ ಬಾಧಿತರಾಗುತ್ತಾರೆ. ಈ ಕಾಯಿದೆ (ಪೋಕ್ಸೋ) ಅನ್ನು ಬದಲಾಯಿಸಲು ಸಂತರ ನೇತೃತ್ವದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು,.: ಎಂದು ಸಿಂಗ್ ಹೇಳಿದ್ದಾರೆ.
ಅಯ್ಯೋಧ್ಯೆಯಲ್ಲಿ ಜೂನ್ 5ರಂದು ಸಿಂಗ್ ನೇತೃತ್ವದಲ್ಲಿ ನಡೆಯಲಿರುವ ಸಂತರ ಸಮಾವೇಶಕ್ಕೆ ಪೂರ್ವತಯಾರಿ ಉಸ್ತುವಾರಿಗಾಗಿ ಗುರುವಾರ ಅವರು ಬಹರೈಚ್‌ಗೆ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ 11 ಲಕ್ಷ ಸಂತರು ಭಾಗವಹಿಸುತ್ತಾರೆ ಎಂದು ಅವರು ಹೇಳಿಕೊಂಡಿದ್ದಾರೆ.
ದೇಶದ ಖ್ಯಾತನಾಮ ಕುಸ್ತಿಪಟುಗಳು ಸಿಂಗ್ ಬಂಧನ ಕೋರಿ ಎಪ್ರಿಲ್ 23ರಿಂದ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕಳೆದ ತಿಂಗಳು, ಸುಪ್ರೀಂ ಕೋರ್ಟ್ ಸೂಚನೆ ನಂತರ ದಿಲ್ಲಿ ಪೊಲೀಸರು ಸಿಂಗ್ ವಿರುದ್ಧ ಎರಡು ಪ್ರಕರಣ ದಾಖಲಿಸಿದ್ದಾರೆ. ಒಂದು ಪ್ರಕರಣ ಅಪ್ರಾಪ್ತೆಯ ದೂರಿನ ಮೇಲೆ ಪೋಕ್ಸೋ ಕಾಯಿದೆಯಡಿ ದಾಖಲಾಗಿದ್ದರೆ ಇತರ ದೂರುದಾರರು ವಯಸ್ಕರಾಗಿದ್ದಾರೆ.