ನರೇಗಾದಡಿ ಕುಂದಾಪುರದಲ್ಲಿ ಅತೀ ಹೆಚ್ಚು ಬಾವಿ ರಚನೆ
ಈ ವರ್ಷ ಕುಂದಾಪುರ 1412, ಬೈಂದೂರು 435 ಬಾವಿ ನಿರ್ಮಾಣ

ಕುಂದಾಪುರ, ಮೇ 26: ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ಬಿರು ಬೇಸಿಗೆ ಬಿಸಿಲಿಗೆ ನದಿ ಸಹಿತ ಬಹುತೇಕ ಎಲ್ಲಾ ಜಲ ಮೂಲಗಳು ಬತ್ತಿ ಹೋಗುತ್ತಿದ್ದು, ಜಲಕ್ಷಾಮ ತಲೆದೋರಿದೆ.
ಇದರಿಂದಾಗಿ ಒಂದು ಕಾಲದಲ್ಲಿ ನೀರಿಗೆ ಪ್ರಮುಖ ಜಲಮೂಲವಾಗಿದ್ದು, ಜನರು ಸೇರಿದಂತೆ ಜೀವಜಂತುಗಳ ದಾಹ ತಣಿಸುತಿದ್ದ ತೆರೆದ ಬಾವಿ ವಿವಿಧ ಕಾರಣಗಳಿಂದ ಮನೆ ಮನೆಗಳಿಂದ ಕಾಣೆಯಾಗುತಿದ್ದು, ಈಗ ಕುಡಿಯುವ ನೀರಿಗೆ ಅಭಾವ ಕಾಲದಲ್ಲಿ ಜನರಿಗೆ ಮತ್ತೆ ನೆನಪಿಗೆ ಬರತೊಡಗಿದೆ.
ಹೀಗಾಗಿ ಕಳೆದೊಂದು ವರ್ಷದಲ್ಲಿ ಉಡುಪಿ ಜಿಲ್ಲೆಯಲ್ಲಿ ನರೇಗಾದಡಿ ಕುಡಿಯುವ ನೀರಿನ ಬಾವಿ ನಿರ್ಮಾಣ ಅತೀ ಹೆಚ್ಚು ಮಾನವ ದಿನಗಳನ್ನು ಸೃಜಿಸಿದೆ. ಕಳೆದೊಂದು ವರ್ಷದಿಂದ ಜಿಲ್ಲೆಯಲ್ಲಿ ಒಟ್ಟು 2,831 ತೆರೆದ ಬಾವಿಗಳು ನರೇಗಾದಡಿ ನಿರ್ಮಾಣಗೊಂಡಿವೆ. ಈ ಪೈಕಿ ಕುಂದಾಪುರದಲ್ಲಿಯೇ ಅತೀ ಹೆಚ್ಚು 1412 ಬಾವಿಗಳನ್ನು ತೊಡಲಾಗಿದೆ. ಇದು ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಸ್ವಲ್ಪ ಮಟ್ಟಿಗೆ ಅನುಕೂಲವಾಗಿದೆ.
ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಿರುವುದರ ಜತೆಗೆ ನೀರಿನ ಬಳಕೆದಾರರ ಸಂಖ್ಯೆಯೂ ಹೆಚ್ಚುತ್ತಿದೆ. ಇದರಿಂದ ಇತ್ತೀಚಿನ ವರ್ಷಗಳಲ್ಲಿ ನೀರಿನ ಕೊರೆತೆಯೂ ಹೆಚ್ಚಾಗಿದೆ. ಆ ಕಾರಣಕ್ಕೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ)ಯಡಿ ಗ್ರಾಪಂಗಳಲ್ಲಿ ವೈಯಕ್ತಿಕ ಬಾವಿ ತೆಗೆಯಲು ಅನುದಾನ ನೀಡಲಾಗುತ್ತಿದೆ. ಕಳೆದೆರಡು ವರ್ಷಗಳಿಂದ ಇದರ ಸದುಪಯೋಗವು ಹೆಚ್ಚುತ್ತಿದೆ.
ಜಿಲ್ಲೆಯ ಕುಂದಾಪುರ ಹಾಗೂ ಬೈಂದೂರು ತಾಲೂಕುಗಳ ಹೆಚ್ಚಿನ ಗ್ರಾಮಗಳಲ್ಲಿ ಬೇಸಿಗೆಯ ಕೊನೆಯ ತಿಂಗಳಾದ ಮಾರ್ಚ್, ಎಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ನೀರಿನ ಸಮಸ್ಯೆ ತಲೆದೋರುತ್ತದೆ. ಸಮುದ್ರ ತೀರದ ಗ್ರಾಮಗಳಲ್ಲಿ ಉಪ್ಪು ನೀರಿನ ಸಮಸ್ಯೆ, ಕೆಲವೆಡೆಗಳಲ್ಲಿ ಇದ್ದ ಬಾವಿ ಬರಿದಾಗುವುದು ಇನ್ನಿತರ ಕಾರಣಗಳಿಂದ ಹೊಸ ಬಾವಿ ತೋಡುವವರ ಸಂಖ್ಯೆ ಹೆಚ್ಚುತ್ತಿದೆ.
2022-23ನೇ ಸಾಲಿನಲ್ಲಿ ಕುಂದಾಪುರದಲ್ಲಿ 1412 ಬಾವಿ ಹಾಗೂ ಬೈಂದೂರಿನಲ್ಲಿ 435 ಬಾವಿಗಳನ್ನು ನಿರ್ಮಿಸಲಾಗಿದ್ದು, ನರೇಗಾದಡಿ ಬಾವಿ ತೋಡಲು ಮೊದಲು ಗರಿಷ್ಠ 1.20 ಲಕ್ಷ ರೂ. ಅನುದಾನ ಸಿಗುತ್ತಿತ್ತು. ಈಗ ಅದನ್ನು 1.50 ಲಕ್ಷ ರೂ.ಗೆ ಏರಿಸಲಾಗಿದೆ. ಅಗತ್ಯವಿರುವವರು ಆಯಾಯ ಗ್ರಾ.ಪಂ.ಗಳನ್ನು ಸಂಪರ್ಕಿಸಲು ಅವಕಾಶವಿದೆ.
ಕಳೆದ ವರ್ಷವೂ ಕುಂದಾಪುರದ 46 ಗ್ರಾಪಂಗಳಲ್ಲಿ ಒಟ್ಟು 586 ಹಾಗೂ ಬೈಂದೂರು ತಾಲೂಕಿನ 15 ಗ್ರಾಪಂಗಳಲ್ಲಿ 451 ಸೇರಿದಂತೆ ಒಟ್ಟಾರೆ 1037 ವೈಯಕ್ತಿಕ ಬಾವಿಗಳನ್ನು ನಿರ್ಮಾಣ ಮಾಡಲಾಗಿತ್ತು. ಈ ಸಲವೂ ಅದೇ ರೀತಿ ಉಭಯ ತಾಲೂಕುಗಳಲ್ಲಿ ಒಟ್ಟಾರೆ 1847 ಬಾವಿಗಳನ್ನು ರಚಿಸಲಾಗಿದೆ.
2022-23ನೇ ಸಾಲಿನ ತಾಲೂಕುವಾರು ಮಾಹಿತಿ
ಕುಂದಾಪುರ: 1412
ಬೈಂದೂರು: 435
ಬ್ರಹ್ಮಾವರ: 292
ಕಾರ್ಕಳ: 287
ಉಡುಪಿ: 172
ಕಾಪು: 137
ಹೆಬ್ರಿ: 96
ಉಡುಪಿ ಜಿಲ್ಲೆ: 2831
"ಉಡುಪಿ ಜಿಲ್ಲೆಯಲ್ಲಿ ನರೇಗಾದಲ್ಲಿ ಸಾಮುದಾಯಿಕ ಕಾಮಗಾರಿಗಳಿಗಿಂತ ವೈಯಕ್ತಿಕ ಕಾಮಗಾರಿಗೆ ಜನ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಮನೆಗಳ ಬಾವಿಗೆ ಹೆಚ್ಚು ಬೇಡಿಕೆಗಳು ಬರುತ್ತಿವೆ. ಒಂದು ವರ್ಷದಲ್ಲಿ 2800ಕ್ಕೂ ಮಿಕ್ಕಿ ಬಾವಿಗಳು ನಿರ್ಮಾಣವಾಗಿವೆ. ಬಾವಿ ಅಗತ್ಯವಿರುವವರು ಗ್ರಾಪಂಗೆ ಅರ್ಜಿ ಸಲ್ಲಿಸಿದ ವಾರದೊಳಗೆ ಮಂಜೂರು ಮಾಡಲು ಕ್ರಮಕೈಗೊಳ್ಳಲಾಗುತ್ತದೆ".
-ಪ್ರಸನ್ನ ಎಚ್., ಉಡುಪಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ