ಕಂಬಳದಲ್ಲಿ ಮಹಿಳೆಯರಿಗೂ ಪ್ರಾಧಾನ್ಯತೆ ನೀಡಲು ಚಿಂತನೆ: ಕೆ.ಗುಣಪಾಲ ಕಡಂಬ

ಉಡುಪಿ, ಮೇ 26: ಇಂದು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳದಲ್ಲಿ ಮಹಿಳೆಯರಿಗೆ ಹೆಚ್ಚಿನ ಪಾತ್ರವಿಲ್ಲ. ಆದರೆ ಇನ್ನು ಮುಂದೆ ಕಂಬಳದಲ್ಲಿ ಮಹಿಳೆ ಯರಿಗೂ ಪ್ರಾಧಾನ್ಯತೆಯನ್ನು ನೀಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಕಂಬಳ ನಿರ್ವಹಣೆ ಹಾಗೂ ಸಂರಕ್ಷಣೆ ತರಬೇತಿ ಅಕಾಡೆಮಿಯ ಸಂಚಾಲಕರಾದ ಕೆ.ಗುಣಪಾಲ ಕಡಂಬ ಹೇಳಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನ ತುಳುಸಂಘ ಹಾಗೂ ತುಳುಕೂಟ ಉಡುಪಿ ಇವುಗಳ ಸಹಭಾಗಿತ್ವದಲ್ಲಿ ನಡೆದ ತುಳು ಸಂಸ್ಕೃತಿ ಹಬ್ಬ ‘ತುಳು ಐಸಿರಿ-2023’ರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ತುಳುನಾಡಿನ ಸಂಸ್ಕೃತಿ ಕಂಬಳದ ಕುರಿತು ಮಾತನಾಡುತಿದ್ದರು.
ಕರಾವಳಿಯಲ್ಲಿ ಸಾಂಪ್ರದಾಯಿಕ ಕಂಬಳ ಎಂಬುದು ಹೆಚ್ಚುಕಡಿಮೆ ಪ್ರತಿ ಊರಿನಲ್ಲೂ ನಡೆಯುತ್ತದೆ. ಇದು ನಮ್ಮ ಜನರ ನಂಬಿಕೆ, ಆಚರಣೆ ಹಾಗೂ ಆರಾಧನೆಯಾಗಿದೆ. ಇದು ರೈತರ ಬದುಕಿನ ಒಂದು ಭಾಗದಂತೆ ನಡೆಯುತ್ತದೆ. ಕಂಬಳಗಳಲ್ಲೇ ಅತೀ ಪುರಾತನ ಎನ್ನಬಹುದಾದ ಜೈನರಿಂದ ಪ್ರಾರಂಭವಾಗಿ ಇಂದು ಬಂಟರು ನಡೆಸುತ್ತಿರುವ ‘ವಂಡಾರು ಕಂಬಳ’ ಈಗಲೂ ಅತ್ಯಂತ ಸಂಪ್ರದಾಯಬದ್ಧವಾಗಿ ನಡೆಯುತ್ತಿದೆ ಎಂದರು.
ಉಭಯ ಜಿಲ್ಲೆಗಳಲ್ಲಿ ಸಂಪ್ರದಾಯಿಕವಾಗಿ ನಡೆಯುತಿದ್ದ ಕಂಬಳ 1974ರ ಬಳಿಕ ವಾಣಿಜ್ಯೀಕರಣಗೊಂಡಿದ್ದು, ಇದೀಗ ಎಲ್ಲರನ್ನೂ ಆಕರ್ಷಿಸುವಂತೆ ನಡೆಸಲಾಗುತ್ತಿದೆ. ಕಂಬಳಕ್ಕೆ ಶ್ರೀಮಂತ-ಬಡವ ಎಂಬ ತಾರತಮ್ಯವಿಲ್ಲ. ಜಾತಿ-ಮತಗಳ ಬೇಧವಿಲ್ಲ. ಹೀಗಾಗಿ ಕರಾವಳಿಯ ಜಾನಪದ ಕ್ರೀಡೆ ಇಂದು ದೇಶ-ವಿದೇಶಗಳ ಜನರನ್ನು ಆಕರ್ಷಿಸುತ್ತಿದೆ ಎಂದರು.
ಕಂಬಳ ಓಡಿಸುವವರ ಸಂಖ್ಯೆ ಕಡಿಮೆ ಇರುವುದು ತೊಡಕಾಗಿ ಕಂಡಿದ್ದರಿಂದ 2011ರಲ್ಲಿ ಕಂಬಳ ಓಡಿಸುವವರಿಗೆ ತರಬೇತಿ ನೀಡಲು ಕಂಬಳ ನಿರ್ವಹಣೆ ಮತ್ತು ಸಂರಕ್ಷಣೆ ತರಬೇತಿ ಅಕಾಡೆಮಿಯನ್ನು ಪ್ರಾರಂಭಿಸ ಲಾಗಿದೆ. ಆರು ಬ್ಯಾಚ್‌ಗಳಲ್ಲಿ 150ಕ್ಕೂ ಅಧಿಕ ಮಂದಿ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ ಎಂದರು.
ಆರನೇ ಬ್ಯಾಚ್‌ನಲ್ಲಿ ಅತ್ಯುತ್ತಮ ಗುಣಮಟ್ಟದ ಕಂಬಳ ಓಡಿಸುವವರು ಬಂದಿದ್ದು, ಕಂಬಳ ಇಂದು ಪ್ರಸಿದ್ಧಿಗಾಗಿ (ಸೆಲೆಬ್ರಿಟಿ) ಸಿನಿಮಾ ತಾರೆಯರನ್ನು, ಕ್ರಿಕೆಟಿಗರನ್ನು ನೋಡಬೇಕಿಲ್ಲ. ಶ್ರೀನಿವಾಸ ಗೌಡ ಕಂಬಳದ ಸೆಲೆಬ್ರಿಟಿ ಯಾಗಿ ಹೊರಹೊಮ್ಮಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಕಂಬಳದ ಓಟದ ವೇಳೆ ಮೊದಲ ಲೇಸರ್ ಭೀಮ್‌ನ್ನು ಬಳಸುತಿದ್ದು, ಇದೀಗ ಅಟೋಮ್ಯಾಟಿಕ್ ಇಲೆಕ್ಟ್ರಾನಿಕ್ಸ್ ಟೈಮರ್‌ನ್ನು ಬಳಸುವುದರಿಂದ ಪಾರದರ್ಶ ಕತೆಯೂ ಇದ್ದು, ಯಾವುದೇ ಬಲಾಢ್ಯ ಕೋಣಗಳ ಧಣಿ ಯಾವುದೇ ಆಟ ಆಡಲು ಸಾಧ್ಯವಿಲ್ಲ ಎಂದರು.
ಪತ್ರಕರ್ತ, ಡೈಜಿವರ್ಲ್ಡ್ ಮೀಡಿಯಾದ ಆಡಳಿತ ನಿರ್ದೇಶಕ ವಾಲ್ಟರ್ ನಂದಳಿಕೆ ತುಳು ಐಸಿರಿಯನ್ನು ಉದ್ಘಾಟಿಸಿದರು. ತುಳುವಿನ ಇಂಪು ಇಂದು ವಿಶ್ವದ ಹೆಚ್ಚಿನ ದೇಶಗಳಲ್ಲಿ ಕೇಳಿಬರುತ್ತಿದೆ. 25ಕ್ಕೂ ಅಧಿಕ ದೇಶಗಳಲ್ಲಿ ತುಳು ಸಂಘಗಳೂ ಇವೆ ಎಂದ ಅವರು ಜೀವನದಲ್ಲಿ ಸಾಧನೆಯನ್ನು ಮಾಡಲು ಹೊರಟಾಗ ಟೀಕೆಗಳು ಸಾಮಾನ್ಯ. ಟೀಕೆಗಳನ್ನು ಕಡೆಗಣಿಸಿ ಸಾಧನೆಯತ್ತ ಗಮನ ಕೇಂದ್ರೀಕರಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ತುಳುಕೂಟದ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ ನಾಯಕ್, ಎಂಜಿಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ ಉಪಸ್ಥಿತರಿದ್ದರು.
ಎಂಜಿಎಂ ಕಾಲೇಜು ತುಳು ಸಂಘದ ಸಂಚಾಲಕ ಡಾ.ಪುತ್ತಿ ವಸಂತ ಕುಮಾರ್ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಕಲ್ಪಿತ ವಂದಿಸಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

