45ರಿಂದ 50 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಕ್ರಮ ನಡೆಸಿ ಚುನಾವಣೆ ಗೆದ್ದಿದೆ: ಕುಮಾರಸ್ವಾಮಿ ಆರೋಪ
''ನಿಖಿಲ್ ಸೋಲಿಗೆ ಕ್ಯೂಆರ್ ಕೋಡ್‍ಗಳ ಕೂಪನ್‍ಗಳೇ ಕಾರಣ''
ಬೆಂಗಳೂರು, ಮೇ 26: ಇತ್ತೀಚಿಗೆ ನಡೆದ ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದ್ದು, ಈ ಸಂಬಂಧ ಮಿಸ್ಟರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಕ್ತ ತನಿಖೆ ನಡೆಸಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಶುಕ್ರವಾರ ನಗರದ ಜೆಡಿಎಸ್ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸುಳ್ಳು ಗ್ಯಾರಂಟಿಗಳ ಜತೆಗೆ ಅಕ್ರಮವಾಗಿ ಕೂಪನ್‍ಗಳನ್ನು ಹಂಚಿ ರಾಮನಗರ, ಮಾಗಡಿ ಸೇರಿದಂತೆ ರಾಜ್ಯದಲ್ಲಿ 45ರಿಂದ 50 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ಅಕ್ರಮವಾಗಿ ಗೆದ್ದಿದೆ. ಮಿಸ್ಟರ್ ಸಿದ್ದರಾಮಯ್ಯ ಧೈರ್ಯ ಇದ್ದರೆ ಈ ಅಕ್ರಮವನ್ನು ತನಿಖೆಗೆ ಒಳಪಡಿಸಿ ಎಂದು ಒತ್ತಾಯಿಸಿದರು.
ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಸೋಲಿಗೆ ಕಾಂಗ್ರೆಸ್ ಪಕ್ಷವು ಮತದಾನಕ್ಕೆ ಕೆಲವೇ ಗಂಟೆಗಳ ಮುನ್ನ ಹಂಚಿದ ಕ್ಯೂಆರ್ ಕೊಡ್‍ಗಳು ಉಳ್ಳ ಈ ಕೂಪನ್‍ಗಳೇ ಕಾರಣ. ಇದು ಗಂಭೀರ ಸ್ವರೂಪದ ಚುನಾವಣೆ ಅಕ್ರಮ.3 ಸಾವಿರ ಹಾಗೂ 5 ಸಾವಿರ ಮೊತ್ತದ ಕ್ಯೂ ಆರ್ ಕೋಡ್‍ಗಳನ್ಜು ಹೊಂದಿರುವ ಕೂಪನ್‍ಗಳನ್ನು ಮತದಾನಕ್ಕೆ ಕೆಲವೇ ಗಂಟೆಗಳ ಮುನ್ನ ಮತದಾರರಿಗೆ ಹಂಚಲಾಯಿತು. ಈ ಕೂಪನ್ ಗಳಿಂದಲೇ ನಾವು ಸೋಲಬೇಕಾಯಿತು ಎಂದು ದೂರಿದರು.
ರಾಮನಗರ, ಮಾಗಡಿ, ರಾಜರಾಜೇಶ್ವರಿ ನಗರ ಸೇರಿದಂತೆ ರಾಜ್ಯದ 45ರಿಂದ 50 ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಈ ರೀತಿಯ ಅಕ್ರಮ ಮಾಡಿದೆ. ಬಿಜೆಪಿ ಸರಕಾರದ ಅಕ್ರಮಗಳನ್ನು ತನಿಖೆ ಮಾಡಿಸುವೆ ಎಂದು ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲು ಈ ಕೂಪನ್ ಅಕ್ರಮದ ಬಗ್ಗೆ ತನಿಖೆ ಮಾಡಿಸಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.
ಸುಮಾರು ನಲವತ್ತೆರಡು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದವರು ಗಿಫ್ಟ್ ಕೂಪನ್ ಹಂಚಿದ್ದಾರೆ. ಆ ಕೂಪನ್ ಕೊಟ್ಟರೆ, ಮೂರು, 5 ಸಾವಿರ ಬೆಲೆಯ ವಸ್ತುಗಳು ಸಿಗುತ್ತೆ ಎಂದು ಆಸೆ ಹುಟ್ಟಿಸಿದ್ದಾರೆ. ಒಂದೊಂದು ಕ್ಷೇತ್ರದಲ್ಲಿ ಸುಮಾರು 60 ಸಾವಿರ ಕೂಪನ್ ಹಂಚಿದ್ದಾರೆ ಎಂದ ಅವರು, ಪ್ರಜಾಪ್ರಭುತ್ವದಲ್ಲಿ ಗೆಲವು ಗೆಲವೇ. ಆದರೆ, ಮಹಾತ್ಮ ಗಾಂಧೀಜಿ ಹೆಸರು ಹೇಳುವ, ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಎಂದು ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್ ಅತ್ಯಂತ ಕೀಳು ಕೆಲಸ ಮಾಡಿದೆ. ಆ ಪಕ್ಷಕ್ಕೆ ನೈತಿಕತೆ ಎನ್ನುವುದು ಇದೆಯಾ ಎಂದು ಅವರು ಪ್ರಶ್ನೆ ಮಾಡಿದರು.