‘ಸಂಸತ್ ಭವನ’ ಹೆಸರಲ್ಲಿ ಸುಳ್ಳಿನ ಕಾರ್ಯಕ್ರಮ ಆಯೋಜಿಸುತ್ತಿರುವ ಬಿಜೆಪಿ: ಯೋಗೇಂದ್ರ ಯಾದವ್
ಬೆಂಗಳೂರು, ಮೇ 26: ‘ಹೊಸದಿಲ್ಲಿಯಲ್ಲಿ ಮೇ 28ರಂದು ವಿ.ಡಿ.ಸಾವರ್ಕರ್ ಅವರ ಜನ್ಮ ದಿನವಾಗಿದ್ದು, ಅಂದೇ ನೂತನ ಸಂಸತ್ತು ಭವನ ಲೋಕಾರ್ಪಣೆಯ ಹೆಸರಿನಲ್ಲಿ ಸುಳ್ಳಿನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತಿದೆ’ ಎಂದು ಪ್ರಗತಿಪರ ಚಿಂತಕ ಯೋಗೇಂದ್ರ ಯಾದವ್ ಆರೋಪಿಸಿದ್ದಾರೆ.
ಶುಕ್ರವಾರ ‘ಎದ್ದೇಳು ಕರ್ನಾಟಕ’ ವತಿಯಿಂದ ನಗರದ ಕೊಂಡಜ್ಜಿ ಬಸಪ್ಪ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗದಲ್ಲಿ ಆಯೋಜಿಸಿದ್ದ ‘ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ದುಡಿದ ಕಾರ್ಯಕರ್ತರಿಗೆ ಅಭಿನಾಂದನಾ ಸಮಾವೇಶದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮಕ್ಕೆ ನಾನು ಬರಬೇಕಾದರೆ ‘ಕಾಂಗ್ರೆಸ್ ಪಕ್ಷದ ಗೆಲುವನ್ನು ಆಚರಣೆ ಮಾಡಲು ಹೋಗುತ್ತಿದ್ದೀರಾ’ ಎಂದು ಕೆಲವರು ಪ್ರಶ್ನಿಸಿದ್ದಾರೆ. ಆದರೆ ನಾವು ಯಾವುದೇ ರಾಜಕೀಯ ಪಕ್ಷದ ಗೆಲುವನ್ನು ಆಚರಣೆ ಮಾಡಲು ಈ ಕಾರ್ಯಕ್ರಮವನ್ನು ಆಯೋಜಿಸಿಲ್ಲ. ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದು, ತಪ್ಪು ಮಾಡಿದಾಗ ಈ ಕಾರ್ಯಕ್ರಮದ ವೇದಿಕೆಯ ಮೇಲೆ ಕುಳಿತವರು ಕಾಂಗ್ರೆಸ್‍ನ ನಿಲುವನ್ನೂ ವಿರೋಧಿಸಿದ್ದಾರೆ ಎಂದರು.
ಮೇ 28ರಂದು ದಿಲ್ಲಿಯಲ್ಲಿ ಏನು ನಡೆಯುತ್ತಿದೆ ಎಂದು ನಾವು ಒಮ್ಮೆ ಗಮನಿಸುವುದಾರೆ, ಒಂದು ಸುಳ್ಳಿನ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಈ ಭಾವನೆಗಳಲ್ಲದ ಸಂಸತ್ತಿನ ನೂತನ ಭವನವನ್ನು ಉದ್ಘಾಟನೆ ಮಾಡಲಾಗುತ್ತಿದೆ. ಮೇ 28 ವಿ.ಡಿ. ಸಾವರ್ಕರ್ ಹುಟ್ಟಿದ ದಿನವಾದ ಕಾರಣ ಅಂದು ಸಂಸತ್ತು ಭವನವನ್ನು ಉದ್ಘಾಟನೆ ಮಾಡಲಾಗುತ್ತಿದೆ. ಆದರೆ ಇದನ್ನು ಸಾರ್ವಜನಿಕವಾಗಿ ಬಿಜೆಪಿಯವರು ಎಲ್ಲೂ ಹೇಳುತ್ತಿಲ್ಲ ಎಂದು ಅವರು ತಿಳಿಸಿದರು.
ನಾವು ವಿ.ಡಿ.ಸಾವರ್ಕರ್ ಎಂದು ಕರೆಯುತ್ತೇವೆ. ಆದರೆ ಅವರನ್ನು ಕೆಲವರು ವೀರ ಸವಾರ್ಕರ್ ಎಂದು ಕರೆಯುತ್ತಾರೆ. ವೀರ ಎಂಬ ಬಿರುದನ್ನು ಬೇರೆ ಯಾರು ಇಟ್ಟಿಲ್ಲ. ಸಾವರ್ಕರ್ ಅವರು ತಮಗೆ ತಾವೇ ಹೀಗೆ ಕರೆದುಕೊಂಡಿದ್ದಾರೆ ಎಂದು ಯೋಗೇಂದ್ರ ಯಾದವ್ ನೆನಪಿಸಿಕೊಂಡರು.
ನಾವು ಇಲ್ಲಿ ಸೇರಿರುವುದು ನಿಜವಾದ ಹೋರಾಟಗಾರರನ್ನು ನೆನೆಯುವುದಕ್ಕಾಗಿ, ನಾವು ರಾಜ್ಯಾಭಿಷೇಕಕ್ಕೆ ಇಲ್ಲಿ ನೆರೆದಿಲ್ಲ. ಏಕೆಂದರೆ ಪ್ರಜಾಪ್ರಭುತ್ವದಲ್ಲಿ ರಾಜ್ಯಾಭಿಷೇಕ ಇರುವುದಿಲ್ಲ, ಜನಾಭಿಷೇಕ ಮಾತ್ರ ಇರುತ್ತದೆ. ಕರ್ನಾಟಕದ ಗೆಲುವನ್ನು ಆಚಾರಿಸಲು ಮತ್ತು ಭಾರತದ ಸಿದ್ಧಾಂತವನ್ನು ಪ್ರತಿಪಾದಿಸಲು ನಾವು ನೆರೆದಿದ್ದೇವೆ. ಹಾಗಾಗಿ ನಾವು ಇಲ್ಲಿ ದೃಢಸಂಕಲ್ಪವನ್ನು ಕೈಗೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು.
ವಿಧಾನ ಸಭಾ ಚುನಾವಣೆಯು ಸಾಮನ್ಯ ಚುನಾವಣೆಯಾಗಿರಲಿಲ್ಲ. ಈ ಚುನಾವಣೆಯು ದೇಶದ ಭವಿಷ್ಯವಾಗಿದೆ. ಕರ್ನಾಟಕ ದಲಿತ, ರೈತ ಸೇರಿ ವಿವಿಧ ಚಳುವಳಿಗಳಿಗೆ ವೇದಿಕೆ ಮಾಡಿಕೊಟ್ಟಿದೆ. ಬೇರೆ ರಾಜ್ಯಗಳಿಗೆ ಮಾದರಿಯಾಗಿದೆ. ಬೇರೆ ರಾಜ್ಯಗಳು ಕಾರ್ನಟಕವನ್ನೇ ಮಾದರಿಯನ್ನಾಗಿ ಮಾಡಿಕೊಂಡರೆ, ಅಲ್ಲೂ ಪ್ರಜಾಪ್ರಭುತ್ವಕ್ಕೆ ಗೆಲುವಾಗುತ್ತದೆ ಎಂದು ಅವರು, ಎದ್ದೇಳು ಕರ್ನಾಟಕದಂತಹ ಸಂಘಟನೆಯು ಸ್ವತಂತ್ರ ಹೋರಾಟಗಾರ ದೊರೆಸ್ವಾಮಿ ಅವರ ಇದ್ದಾಗ ಇರಬೇಕಾಗಿತ್ತು ಎಂದು ತಿಳಿಸಿದರು.
ಜಮಾತೆ ಇಸ್ಲಾಮಿ ಹಿಂದ್‍ನ ರಾಜ್ಯ ಉಪಾಧ್ಯಕ್ಷ ಯೂಸುಫ್ ಕನ್ನಿ ಮಾತನಾಡಿ, ಸಂವಿಧಾನದ ವಿರುದ್ಧ ಘೋಷಣೆ ಕೂಗಿದವರನ್ನು ನಾವು ಇಂದು ಸೋಲಿಸಿದ್ದೇವೆ. ಇದು ಬಡವರ, ದಲಿತರ, ಮಹಿಳೆಯರ ಹಿಂದುಳಿದವರ ಗೆಲುವಾಗಿದೆ ಎಂದರು.
ಎದ್ದೇಳು ಕರ್ನಾಟಕದ ಮುಖಂಡ ಜೆರಾಲ್ಡ್ ಡಿಸೋಜ ಮಾತನಾಡಿ, ನಾವು ಸಂವಿಧಾನ, ಪ್ರಜಾಪ್ರಭುತ್ವವನ್ನು ಉಳಿಸಲು ಪಣ ತೊಟ್ಟಿದ್ದೇವು, ಅದನ್ನು ಸ್ವಲ್ಪಮಟ್ಟಿಗೆ ಸಾಧಿಸಿದ್ದೇವೆ. ಇದು ಇಡೀ ಭಾರತಕ್ಕೆ ಹೊಸದಾರಿಯೊಂದನ್ನು ತೋರಿಸಿದೆ. ಎದ್ದೇಳು ಕರ್ನಾಟಕ ಯಾವುದೇ ರಾಜಕೀಯ ಪಕ್ಷದ ಪರವಾಗಿ ಕೆಲಸವನ್ನು ಮಾಡದೆ, ತನ್ನದೆ ಸಿದ್ಧಾಂತದಲ್ಲಿ ಮುಂದುವರೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಸ್ಲಂ ಜನಾಂದೋಲನಾದ ಸಂಚಾಲಕ ನರಸಿಂಹಮೂರ್ತಿ, ಚಾಮರಸ ಮಾಲೀಪಾಟೀಲ, ಎಲ್.ಎನ್. ಮುಕುಂದರಾಜ್ ಮತ್ತಿತರರು ಉಪಸ್ಥಿತರಿದ್ದರು.