ಸುಡಾನ್ನಲ್ಲಿ ಆರೋಗ್ಯ ಸೌಲಭ್ಯದ ತೀವ್ರ ಕೊರತೆ: ಐಸಿಆರ್ಸಿ
ಜಿನೆವಾ, ಮೇ 26: ಸುಡಾನ್ನಲ್ಲಿ ಆರೋಗ್ಯಸೌಲಭ್ಯದ ಕೊರತೆ ತೀವ್ರಗೊಂಡಿದ್ದು ರಾಜಧಾನಿ ಖಾರ್ಟೂಮ್ನಲ್ಲಿ ಕೇವಲ 20%ದಷ್ಟು ಆರೋಗ್ಯ ಸೌಲಭ್ಯಗಳು ಮಾತ್ರ ಇನ್ನೂ ಕಾರ್ಯನಿರ್ವಹಿಸುತ್ತಿವೆ. ಇದು ಹೆಚ್ಚು ಅಗತ್ಯವಿರುವ ವ್ಯವಸ್ಥೆಯ ನಿಜವಾದ ಕುಸಿತವಾಗಿದೆ ಎಂದು ಅಂತರರಾಷ್ಟ್ರೀಯ ರೆಡ್ಕ್ರಾಸ್ ಸಮಿತಿ(ಐಸಿಆರ್ಸಿಸಿ) ವರದಿ ಮಾಡಿದೆ.
ಅಂತರರಾಷ್ಟ್ರೀಯ ರೆಡ್ಕ್ರಾಸ್ ಸಮಿತಿ(ಐಸಿಆರ್ಸಿಸಿ) ದೇಣಿಗೆ ನೀಡಿದ ಶಸ್ತ್ರಚಿಕಿತ್ಸಾ ಸಾಮಾಗ್ರಿಗಳನ್ನು ಸುಡಾನ್ನಲ್ಲಿ ಇನ್ನೂ ಕಾರ್ಯನಿರ್ವಹಿಸುತ್ತಿರುವ ಬೆರಳೆಣಿಕೆಯಷ್ಟು ಆಸ್ಪತ್ರೆಗಳಿಗೆ ಈ ನಿರ್ಣಾಯಕ ವೈದ್ಯಕೀಯ ಸರಬರಾಜನ್ನು ವಿತರಿಸುವುದು ಜೀವನ ಮತ್ತು ಸಾವಿನ ವಿಷಯವಾಗಿದೆ. ಸರಬರಾಜಿನಲ್ಲಿ ಅರಿವಳಿಕೆ, ಪ್ರತಿಜೀವಕಗಳು ಮತ್ತು ಗಾಯಗೊಂಡವರಿಗೆ ಚಿಕಿತ್ಸೆ ಒದಗಿಸಲು ಬಳಸಲಾಗುವ ಇತರ ಪ್ರಮುಖ ವಸ್ತುಗಳು ಸೇರಿವೆ. ಸುಡಾನ್ ರಾಜಧಾನಿ ಖಾರ್ಟೂಮ್ನ 7 ಆಸ್ಪತ್ರೆಗಳಿಗೆ ಆರೋಗ್ಯ ಸೌಲಭ್ಯ ವಿತರಿಸಲಾಗಿದೆ ಎಂದು ಐಸಿಆರ್ಸಿ ಸುಡಾನ್ ನಿಯೋಗ ಹೇಳಿದೆ.
ಸುಡಾನ್ನಲ್ಲಿ ಸಶಸ್ತ್ರಪಡೆ ಮತ್ತು ಅರೆಸೇನಾ ಪಡೆಯ ನಡುವೆ ಎಪ್ರಿಲ್ 15ರಂದು ಘರ್ಷಣೆ ಭುಗಿಲೆದ್ದ ಬಳಿಕ 700ಕ್ಕೂ ಅಧಿಕ ಮಂದಿ ಹತರಾಗಿದ್ದು 5000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿರುವುದರಿಂದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸುವುದು ಬಹುದೊಡ್ಡ ಸವಾಲಿನ ಕಾರ್ಯವಾಗಿದೆ ಎಂದು ಐಸಿಆರ್ಸಿನ ಸುಡಾನ್ ನಿಯೋಗದ ಮುಖ್ಯಸ್ಥ ಅಲ್ಫೋನ್ಸೊ ವೆರ್ಡುಪೆರೆಝ್ ಹೇಳಿದ್ದಾರೆ. `ಆಸ್ಪತ್ರೆಗಳಿಗೆ ನೀರು, ವಿದ್ಯುತ್, ಆಸ್ಪತ್ರೆಯ ಸಿಬಂದಿಗಳಿಗೆ ಮತ್ತು ರೋಗಿಗಳಿಗೆ ಸುರಕ್ಷಿತ ಪರಿಸರದ ತುರ್ತು ಅಗತ್ಯವಿದೆ. ವೈದ್ಯಕೀಯ ಸಿಬಂದಿಗಳ ಕಾರ್ಯವನ್ನು ಗೌರವಿಸುವಂತೆ ಎರಡೂ ಕಡೆಯವರಿಗೆ ಮನವಿ ಮಾಡಿಕೊಳ್ಳುತ್ತೇನೆ. ಹಲವು ಜೀವಗಳು ವೈದ್ಯಕೀಯ ಸಿಬಂದಿಯನ್ನು ಅವಲಂಬಿಸಿವೆ' ಎಂದವರು ಹೇಳಿದ್ದಾರೆ.
ಸಂಘರ್ಷ ಭುಗಿಲೆದ್ದ ಬಳಿಕ ದೇಶದಾದ್ಯಂತ ನೀರು, ವಿದ್ಯುತ್ ಮತ್ತಿತರ ಮೂಲಸೌಕರ್ಯಗಳಿಗೆ ತೀವ್ರ ಹಾನಿಯಾಗಿದೆ. ಆರೋಗ್ಯ ಕ್ಷೇತ್ರದ ಸಿಬಂದಿಗಳು, ಆರೋಗ್ಯ ವ್ಯವಸ್ಥೆ ಹಾಗೂ ಆಂಬ್ಯುಲೆನ್ಸ್ಗಳನ್ನು ಗುರಿಯಾಗಿಸಿ ನಡೆಯುವ ದಾಳಿಯೂ ತೀವ್ರಗೊಂಡಿದೆ. ಖತರ್, ಸೌದಿ ಅರೆಬಿಯಾ ಮುಂತಾದ ದೇಶಗಳು ಪೂರೈಸಿರುವ ನೆರವು ಮತ್ತು ಪರಿಹಾರ ಸಾಮಾಗ್ರಿಗಳನ್ನು, ವೈದ್ಕಕೀಯ ನೆರವನ್ನು ಆಸ್ಪತ್ರೆಗಳಿಗೆ ತಲುಪಿಸುವುದೇ ಸವಾಲಿನ ಕಾರ್ಯವಾಗಿದೆ ಎಂದು ಐಸಿಆರ್ಸಿ ಸುಡಾನ್ ನಿಯೋಗ ಹೇಳಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸುವುದು ಅಂತರಾಷ್ಟ್ರೀಯ ಕಾನೂನಿನಡಿ ಎಲ್ಲರ ಜವಾಬ್ದಾರಿಯಾಗಿದ್ದು ಇದನ್ನು ಘರ್ಷಣೆಯಲ್ಲಿ ನಿರತರಾಗಿರುವ ಎರಡೂ ಬಣಗಳು ಅರಿತುಕೊಳ್ಳಬೇಕು ಎಂದಿದೆ.